ADVERTISEMENT

ಬಿಡಿಎ ಅಧಿಕಾರಿಗಳಿಗೆ ಘೇರಾವ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 19:18 IST
Last Updated 6 ಫೆಬ್ರುವರಿ 2019, 19:18 IST
ಕೆಂಪನಹಳ್ಳಿ ಗ್ರಾಮಕ್ಕೆ ಸಮೀಕ್ಷೆಗೆ ಬಂದ ಬಿಡಿಎ ಅಧಿಕಾರಿಗಳನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಡೆದರು
ಕೆಂಪನಹಳ್ಳಿ ಗ್ರಾಮಕ್ಕೆ ಸಮೀಕ್ಷೆಗೆ ಬಂದ ಬಿಡಿಎ ಅಧಿಕಾರಿಗಳನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಡೆದರು   

ಹೆಸರಘಟ್ಟ: ಕೆಂಪನಹಳ್ಳಿ ಗ್ರಾಮದ ಶಿವರಾಮ ಕಾರಂತ ಬಡಾವಣೆಯ ಜಮೀನು ಸಮೀಕ್ಷೆಗೆ ಬಂದ ಬಿಡಿಎ ಅಧಿಕಾರಿಗಳಿಗೆ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಘೇರಾವ್ ಹಾಕಿ ಅವರನ್ನು ವಾಪಸ್‌ ಕಳುಹಿಸಿದರು.

ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಮಂಗಳಾ ಮತ್ತು ತಹಶೀಲ್ದಾರ್‌ ರಾಜು ಅವರು ಸರ್ವೆ ತಂಡದೊಂದಿಗೆ ಕೆಂಪನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ವಿಷಯ ತಿಳಿದ ರೈತರು ತಂಡೋಪತಂಡವಾಗಿ ಬಂದು ಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ಶಿವರಾಮ ಕಾರಂತ ಬಡಾವಣೆಗೆ ರೈತರು ಜಮೀನು ಕೊಡುವುದಿಲ್ಲ ಎಂದು ಹಗಲು ರಾತ್ರಿ ಸರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಪ್ರಾಣ ಕೊಟ್ಟೇವು ರೈತರು ಜಮೀನು ಕೊಡುವುದಿಲ್ಲ ಎಂದು ಪಟ್ಟು ಹಿಡಿದ್ದೇವೆ. ಇಂಥ ಹೊತ್ತಿನಲ್ಲಿ ರೈತರ ಕಣ್ಣು ತಪ್ಪಿಸಿ ಬಿಡಿಎ ಅಧಿಕಾರಿಗಳು ಸಮೀಕ್ಷೆ ಮಾಡಲು ಬಂದರೆ ಸಹಿಸಿಕೊಳ್ಳಲು ಆಗದು. ಮುಖ್ಯಮಂತ್ರಿಗಳು ಕರೆದು ಮಾತನಾಡುವ ತನಕ ಬಿಡಿಎ ಅಧಿಕಾರಿಗಳು ಇತ್ತ ಸುಳಿಯದಿದ್ದರೆ ಒಳ್ಳೆಯದು’ ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ್ದ ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಮಂಗಳಾ ಪ್ರತಿಕ್ರಿಯಿಸಿ, ‘8 ವರ್ಷಗಳ ಹಿಂದೆ ಇಲ್ಲಿ ಏನು ಪ್ರಗತಿಯಾಗಿದೆ ತಿಳಿದು ವರದಿ ನೀಡಲು ಡಿ.ಸಿ. ಹೇಳಿದ್ದರು. ಆ ಕಾರಣಕ್ಕೆ ಬಂದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT