ADVERTISEMENT

ನಕಲಿ ದಾಖಲೆ: ಬಿಡಿಎ ನಿವೇಶನ ಕಬಳಿಕೆ; ನಿವೃತ್ತ ನೌಕರ ಸೇರಿ ಮೂವರ ಬಂಧನ

ನಿವೃತ್ತ ನೌಕರ ಸೇರಿ ಮೂವರ ಬಂಧನ, ಮತ್ತೊಬ್ಬ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 14:18 IST
Last Updated 28 ಸೆಪ್ಟೆಂಬರ್ 2025, 14:18 IST
ಚಿಕ್ಕರಾಯಿ
ಚಿಕ್ಕರಾಯಿ   

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳನ್ನು ನೋಂದಣಿ ಮಾಡಿಸಿಕೊಂಡು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುಬ್ಬಲಾಳ ಕ್ರಾಸ್ ಬಳಿಯ ಎಂ.ಕೆ.ಎಸ್.ಲೇಔಟ್‍ನ ನಿವಾಸಿ ಕೆ.ಚಿಕ್ಕರಾಯಿ (68), ವಸಂತನಗರದ ಬಿ.ಮಂಜುನಾಥ್ (48) ಮತ್ತು ನಾಗರಬಾವಿಯ ಮುರಳೀಧರ್ (60) ಬಂಧಿತರು. ಮತ್ತೊಬ್ಬ ಆರೋಪಿ ದೇವೇಂದ್ರ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಡಿಎ ನಿವೃತ್ತ ವಿಶೇಷ ಸಹಾಯಕ ಚಿಕ್ಕರಾಯಿ ಅವರು ಇತರೆ ಆರೋಪಿಗಳ ಜತೆ ಸೇರಿ ಈ ಕೃತ್ಯವೆಸಗಿದ್ದರು. ಆರೋಪಿಗಳು ಎಲ್.ಬೈಲಪ್ಪ ಅವರಿಗೆ ಹಂಚಿಕೆಯಾಗಿದ್ದ ಬಿಡಿಎ ನಿವೇಶನದ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ, ನೋಂದಣಿ ಮಾಡಿಸಿಕೊಂಡಿದ್ದರು.

ADVERTISEMENT

ಬೈಲಪ್ಪ ಅವರಿಗೆ 2006ರಲ್ಲಿ ಅರ್ಕಾವತಿ ಬಡಾವಣೆಯ 2ನೇ ಬ್ಲಾಕ್‍ನಲ್ಲಿ 40 ಅಡಿX60 ಅಡಿ ಅಳತೆಯ ನಿವೇಶನ ಹಂಚಿಕೆಯಾಗಿತ್ತು. ಈ ಸಂಬಂಧ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರ ಸಹ ನೋಂದಾಯಿಸಲಾಗಿತ್ತು. 2018ರಲ್ಲಿ ಬೈಲಪ್ಪ ಅವರಿಗೆ ಅರ್ಕಾವತಿ ಬಡಾವಣೆಯ ನಿವೇಶನಕ್ಕೆ ಬದಲಿಯಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ 3ನೇ ಬ್ಲಾಕ್‍ನಲ್ಲಿ ನಿವೇಶನ ಮಂಜೂರಾಗಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಬೈಲಪ್ಪ ಮೃತಪಟ್ಟರು. ನಿವೇಶನದ ಹಕ್ಕು ವರ್ಗಾವಣೆ ಕೋರಿ ಅವರ ಪತ್ನಿ ಲಕ್ಷ್ಮೀದೇವಮ್ಮ ಅವರು ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಆ ನಿವೇಶನದ ದಾಖಲೆಗಳನ್ನು ಪರಿಶೀಲಿಸಿದಾಗ,  ಬೈಲಪ್ಪ ಎಂಬುವವರ ಹೆಸರಿಗೆ ನಿವೇಶನ ನೋಂದಣಿ ಆಗಿರುವುದು ಗೊತ್ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್.ಬೈಲಪ್ಪ ಅವರು ಮೃತಪಟ್ಟಿದ್ದ ವಿಷಯ ತಿಳಿದಿದ್ದ ಚಿಕ್ಕರಾಯಿ, ಅವರ ಹೆಸರಿನಲ್ಲಿ ನಕಲಿ ವ್ಯಕ್ತಿ ಮತ್ತು ದಾಖಲೆಗಳನ್ನು ಸೃಷ್ಟಿಸಿದ್ದ. ಅಸಲಿ ಎಲ್.ಬೈಲಪ್ಪರ ಬದಲಿಗೆ ನಕಲಿ ಬೈಲಪ್ಪನ ಹೆಸರಿನಲ್ಲಿ ಅರ್ಕಾವತಿ ಬಡಾವಣೆಯ ನಿವೇಶನ ರದ್ದು ಹಾಗೂ ಕೆಂಪೇಗೌಡ ಬಡಾವಣೆಯ ನಿವೇಶನದ ಶುದ್ಧ ಕ್ರಯಪತ್ರ ಮಾಡಿಸಿದ್ದ. ಈ ಕೃತ್ಯಕ್ಕೆ ಮಂಜುನಾಥ್, ದಲ್ಲಾಳಿ ಮುರಳೀಧರ್ ಹಾಗೂ ದೇವೇಂದ್ರ ಕೈ ಜೋಡಿಸಿದ್ದರು. ವಂಚನೆ ಸಂಬಂಧ ಬಿಡಿಎ ವಿಚಕ್ಷಣ ದಳದ ಅಧಿಕಾರಿಗಳು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿ.ಮುರುಳೀಧರ್
ಬಿ.ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.