ADVERTISEMENT

ಅಕ್ರಮ ಪ್ರಕರಣಗಳ ತನಿಖೆ ವಿಶೇಷ ತನಿಖಾ ತಂಡಕ್ಕೆ: ಎಸ್.ಆರ್.ವಿಶ್ವನಾಥ್

ಬಿಡಿಎ ಬಡಾವಣೆಗಳಲ್ಲಿ ಕಿರು ಅರಣ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 21:55 IST
Last Updated 18 ಡಿಸೆಂಬರ್ 2020, 21:55 IST
ಎಸ್.ಆರ್.ವಿಶ್ವನಾಥ್
ಎಸ್.ಆರ್.ವಿಶ್ವನಾಥ್   

ಬೆಂಗಳೂರು: ಇನ್ನು ಮುಂದೆ ಬಿಡಿಎ ಬಡಾವಣೆಗಳು ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಹಲವು ಅಕ್ರಮ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವುದು, ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸ್ವಲ್ಪ ವಿನಾಯಿತಿ ನೀಡುವುದು ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ’ರಾಜ್ಯ ಸರ್ಕಾರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಯೊಂದನ್ನು ಮಿಷನ್ 2022 ರಲ್ಲಿ ಪ್ರಸ್ತಾಪ ಮಾಡಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಬಿಡಿಎ ಇನ್ನು ಮುಂದೆ ಅನುಮೋದನೆ ನೀಡುವ ಮತ್ತು ತನ್ನದೇ ಆದ ಬಡಾವಣೆಗಳಲ್ಲಿ ಕಿರು ಅರಣ್ಯವನ್ನು ಬೆಳೆಸುವುದನ್ನು ಕಡ್ಡಾಯಗೊಳಿಸಲಿದೆ‘ ಎಂದರು.

ADVERTISEMENT

’ಬಡಾವಣೆ ಅಭಿವೃದ್ಧಿ ಹಂತದಲ್ಲಿಯೇ ಕೆಲವು ಸಸಿಗಳನ್ನು ನೆಟ್ಟರೆ ಬಡಾವಣೆಯಲ್ಲಿ ಮನೆಗಳು ನಿರ್ಮಾಣವಾಗುವ ವೇಳೆಗೆ ಕಿರು ಅರಣ್ಯ ಬೆಳೆಯಲಿದೆ. ಬಿಲ್ಡರ್ ಅಥವಾ ಬಿಡಿಎ ಸಿಬ್ಬಂದಿ ಒಂದೆರಡು ವರ್ಷಗಳವರೆಗೆ ಈ ಸಸಿಗಳಿಗೆ ನೀರು-ಗೊಬ್ಬರ ಕೊಟ್ಟರೆ ಸಾಕು. ಬೆಳೆದ ನಂತರದ ವರ್ಷಗಳಲ್ಲಿ ನೈಸರ್ಗಿಕವಾಗಿ ಬೆಳವಣಿಗೆ ಹೊಂದುತ್ತವೆ. ಈ ಮೂಲಕ ಉದ್ಯಾನಕ್ಕೆ ನಿರಂತರವಾಗಿ ಹಣ ವ್ಯಯ ಮಾಡುವುದು ತಪ್ಪುತ್ತದೆ ಮತ್ತು ಸುತ್ತಮುತ್ತಲಿನ ಪರಿಸರ ತಂಪಾಗಿರುವುದರ ಜತೆಗೆ ಅಂತರ್ಜಲ ಮಟ್ಟವೂ ಹೆಚ್ಚಳವಾಗುತ್ತದೆ‘ ಎಂದರು.

’ನಕಲಿ ದಾಖಲೆ ಸೃಷ್ಟಿಸಿ ಬಿಡಿಎದಿಂದ ಪರಿಹಾರ ಪಡೆದಿರುವ ಪ್ರಕರಣಗಳು ಮತ್ತು ಮೂಲೆ ನಿವೇಶನಗಳನ್ನು ಸಾಮಾನ್ಯ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿರುವ ಜಾಲ ಸೇರಿದಂತೆ ಇನ್ನಿತರೆ ಅಕ್ರಮ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಬಿಡಿಎಯಿಂದ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಒಂದೆರಡು ದಿನಗಳಲ್ಲಿ ಸಲ್ಲಿಸಲಿದ್ದು, ಆದಷ್ಟೂ ಬೇಗ ತನಿಖೆ ಆರಂಭವಾಗಲಿದೆ' ಎಂದು ತಿಳಿಸಿದರು.

’ಬಿಡಿಎ ಸ್ವಾಧೀನಪಡಿಸಿಕೊಂಡಿದ್ದರೂ ಅಂತಹ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವ ನಿವಾಸಿಗಳಿಗೆ ನಿರ್ದಿಷ್ಟವಾದ ಮಾರುಕಟ್ಟೆ ದರದಲ್ಲಿ ಸ್ವಲ್ಪ ಮಟ್ಟಿನ ಹಣವನ್ನು ಕಟ್ಟಿಸಿಕೊಂಡು ಅವರಿಗೇ ಆ ಜಾಗವನ್ನು ಮಾರಲು ನಿರ್ಧರಿಸಲಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.