ADVERTISEMENT

ಬಿಡಿಎ: ಆಸ್ತಿ ತೆರಿಗೆ ಪಾವತಿಗೆ ಇನ್ನೂ ತೆರೆದಿಲ್ಲ ಕಿಂಡಿ

ಪ್ರವೀಣ ಕುಮಾರ್ ಪಿ.ವಿ.
Published 22 ಜೂನ್ 2021, 20:57 IST
Last Updated 22 ಜೂನ್ 2021, 20:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2021–22ನೇ ಆರ್ಥಿಕ ವರ್ಷ ಪ್ರಾರಂಭವಾಗಿ ಅದಾಗಲೇ ಎರಡೂವರೆ ತಿಂಗಳುಗಳಾಗಿವೆ. ಆದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿವಿಧ ಬಡಾವಣೆಗಳ ನಿವೇಶನದಾರರು ಇನ್ನೂ ಆಸ್ತಿ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ.

ಬಿಡಿಎ ಎರಡು ವರ್ಷಗಳಿಂದೀಚೆಗೆ ಆಸ್ತಿ ತೆರಿಗೆಯನ್ನು ಆನ್‌ಲೈನ್‌ ಮೂಲಕ ಪಾವತಿಸಲು ಮಾತ್ರ ಅವಕಾಶ ಕಲ್ಪಿಸುತ್ತಿದೆ. ಆದರೆ, ಈ ಬಾರಿ ಆಸ್ತಿ ತೆರಿಗೆ ಪಾವತಿಸಲು ಬಿಡಿಎ ವೆಬ್‌ಸೈಟ್ (bdabangalore.org) ನೋಡಿದರೆ, ‘ಕೋವಿಡ್‌ನಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಕಚೇರಿಯಲ್ಲಿ ಶೇ 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ತಿ ತೆರಿಗೆ ಪರಿಷ್ಕರಣೆಗೊಳಿಸಿ ಅಂತರ್ಜಾಲದಲ್ಲಿ ತೆರಿಗೆ ಪಾವತಿಸಲು ಶೀಘ್ರದಲ್ಲೇ ಅನುವು ಮಾಡಿಕೊಡಲಾಗುತ್ತದೆ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ.

‘ಪ್ರತಿವರ್ಷವೂತೆರಿಗೆ ಪಾವತಿಯ ವೆಬ್‌ಲಿಂಕ್‌ ಏಪ್ರಿಲ್‌ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಸಿದ್ಧವಾಗುತ್ತಿತ್ತು. ನಾನು ಯಾವಾಗಲೂ ಆರ್ಥಿಕ ವರ್ಷಾರಂಭದಲ್ಲೇ ತೆರಿಗೆ ಪಾವತಿಸುತ್ತಿದ್ದೆ. ಆದರೆ, ಈ ಸಲ ಜೂನ್‌ ತಿಂಗಳ ಅರ್ಧ ಮುಗಿದರೂ ಇನ್ನೂ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರ ಸೂರ್ಯಕಿರಣ್‌ ತಿಳಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಡಿಎ ಆರ್ಥಿಕ ಸದಸ್ಯ ಎಸ್‌.ಎಂ.ರಾಮಪ್ರಸಾದ್‌, ‘ಆಸ್ತಿ ತೆರಿಗೆಗಳನ್ನು ಪರಿಷ್ಕರಿಸಲಾಗಿದೆ. ಹಾಗಾಗಿ ಆಸ್ತಿತೆರಿಗೆ ಪಾವತಿ ತಂತ್ರಾಂಶದಲ್ಲೂ ಪರಿಷ್ಕೃತ ತೆರಿಗೆ ದರವನ್ನು ಅಳವಡಿಸಲಾಗುತ್ತಿದೆ. ಜೊತೆಗೆ ಈ ತಂತ್ರಾಂಶವನ್ನೂ ಮೇಲ್ದರ್ಜೆಗೇರಿಸಬೇಕಾಗಿದೆ. ಹಾಗಾಗಿ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ’ ಎಂದು ಮಾಹಿತಿ ನೀಡಿದರು.

‘ಆಸ್ತಿ ತೆರಿಗೆಯನ್ನು ತಡವಾಗಿ ಪಾವತಿಸಿದವರಿಗೆ ನಾವು ದಂಡ ಹಾಕುವುದಿಲ್ಲ. ಹಾಗಾಗಿ ತೆರಿಗೆಯನ್ನು ಆರ್ಥಿಕ ವರ್ಷದ ಯಾವ ತಿಂಗಳಿನಲ್ಲಿ ಕಟ್ಟಿದರೂ ಅದರ ಮೊತ್ತ ವ್ಯತ್ಯಾಸವಾಗುವುದಿಲ್ಲ. ಹಾಗಾಗಿ ನಿವೇಶನದಾರರು ಆತಂಕಪಡುವ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಂತ್ರಾಂಶ ಸುಧಾರಣೆಯ ಹೊಣೆ ಹೊತ್ತ ಉಪಕಾರ್ಯದರ್ಶಿ–1 ಎನ್‌.ಎಸ್‌.ಮಧು, ‘ತಂತ್ರಾಂಶ ಸುಧಾರಣೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದ್ದು, ನಿವೇಶನದಾರರು ಆನ್‌ಲೈನ್‌ ಮೂಲಕವೇ ಆಸ್ತಿ ತೆರಿಗೆ ಪಾವತಿಸಬಹುದು’ ಎಂದರು.

‘ಸೌಕರ್ಯ ಕೊಡದೆ ತೆರಿಗೆ ವಿಧಿಸುವುದು ಸರಿಯೇ?’:

‘ಪ್ರಾಧಿಕಾರವು ನಿವೇಶನದಾರರಿಗೆ ಆಸ್ತಿ ತೆರಿಗೆಯನ್ನು ವಿಧಿಸುವುದು ಮೂಲಸೌಕರ್ಯಗಳ ನಿರ್ವಹಣೆಗಾಗಿ. ಆದರೆ, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯಗಳನ್ನು ಪ್ರಾಧಿಕಾರವು ಇನ್ನೂ ಕಲ್ಪಿಸಿಲ್ಲ. ಸೌಕರ್ಯಗಳೇ ಇಲ್ಲದ ಖಾಲಿ ನಿವೇಶನಗಳಿಗೆ ತೆರಿಗೆ ಕಟ್ಟಿಸಿಕೊಳ್ಳುವುದು ಯಾವ ನ್ಯಾಯ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆಯ ಮುಕ್ತ ವೇದಿಕೆಯ ಸೂರ್ಯಕಿರಣ್‌ ಪ್ರಶ್ನಿಸಿದರು.

‘ಬಡಾವಣೆಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವವರೆಗೆ ಬಿಡಿಎ ನಮ್ಮ ಬಡಾವಣೆಯಲ್ಲಿ ವಾರ್ಷಿಕ ತೆರಿಗೆ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. 2016 ರಿಂದ ಇಲ್ಲಿಯವರೆಗೂ ನಾವು ಪಾವತಿಸಿರುವ ತೆರಿಗೆಯನ್ನು ಬಡಾವಣೆಯ ಮೂಲಸೌಕರ್ಯ ಸಂಪೂರ್ಣ ಅಭಿವೃದ್ಧಿಯಾದ ನಂತರದ ವರ್ಷಗಳಿಗೆ ಸರಿಹೊಂದಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.