ಬೆಂಗಳೂರು: ಗ್ರಾಹಕರ ಕುಂದುಕೊರತೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಕ್ತ ಸಭೆ ನಡೆಸಲು ಮುಂದಾಗಿದೆ. ಪ್ರಾಧಿಕಾರದ ವಾಟ್ಸ್‌ಆ್ಯಪ್ ಸಂಖ್ಯೆ ( 94831–66622 ) ಮೂಲಕ ಸಮಸ್ಯೆ ತಿಳಿಸಿದರೆ, 30 ದಿನದೊಳಗೆ ಅಧ್ಯಕ್ಷರನ್ನು ನೇರವಾಗಿ ಭೇಟಿ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ.
ದೀರ್ಘಕಾಲದಿಂದ ಪರಿಹಾರವಾಗದ ಸಮಸ್ಯೆಯಾಗಿರಬೇಕು ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಮಾಡುವಂತೆ ಇದ್ದರೆ ಮಾತ್ರ ಅಧ್ಯಕ್ಷರ ಭೇಟಿಗೆ ಅವಕಾಶ ಇದೆ. ಗ್ರಾಹಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಪರಿಹಾರ ಕಂಡುಕೊಳ್ಳುವಂತೆ ಮಾಡಲಾಗಿದೆ ಎಂದು ಬಿಡಿಎ ತಿಳಿಸಿದೆ.
‘ನೀವು ಬಿಡಿಎ ಆಸ್ತಿ ಹೊಂದಿರುವವರಾಗಿದ್ದರೆ, ದಾಖಲೆಗಳು ಕಾನೂನಿನ ಪ್ರಕಾರ ಸರಿಯಾಗಿದ್ದರೆ ವಾಟ್ಸ್ ಆ್ಯಪ್ ಸಂಖ್ಯೆಗೆ ಅರ್ಜಿಯ ಪ್ರತಿಯನ್ನು ಕಳುಹಿಸಬಹುದು. ಬಿಡಿಎ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಮುಕ್ತ ಸಭೆಗೆ 30 ದಿನಗಳಲ್ಲಿ ನಿಮ್ಮನ್ನು ಆಹ್ವಾನಿಸಲಾಗುತ್ತದೆ ಮತ್ತು ಕಾನೂನು ತೊಡಕುಗಳು ಇಲ್ಲದಿದ್ದರೆ ಸಮಸ್ಯೆ ಬಗ್ಗೆ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ಬಿಡಿಎ ವಾಟ್ಸ್ ಆ್ಯಪ್ ನಂಬರ್‌ನಲ್ಲಿ ನಮ್ಮ ತೊಂದರೆ ಹೇಳಿಕೊಳ್ಳುವುದು. ಅದಕ್ಕೆ ಸಂಬಂಧಿಸಿದಂತೆ 30 ದಿನದೊಳಗೆ ಅಧ್ಯಕ್ಷರ ಭೇಟಿ ಮಾಡುವುದು ಅಸಾಧ್ಯ. ಯಾವುದೂ ಫಲಪ್ರದವಾಗುವುದಿಲ್ಲ’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಕೆಲವರು, 30 ದಿನಗಳೊಳಗೆ ಅಧ್ಯಕ್ಷರನ್ನು ಭೇಟಿ ಮಾಡಲು ಅವಕಾಶ ಸಿಗಬಹುದು. ಆದರೆ, ಅಲ್ಲಿಂದ ಮುಂದೇನು? ಅಲ್ಲಿಂದ ಅರ್ಜಿಗಳ ವಿಲೇವಾರಿ ಮತ್ತೆ ವಿಳಂಬವಾಗುವ ಸಾಧ್ಯತೆಗಳಿವೆ. ಸರಳವಾಗಿರುವ ವಿಚಾರಗಳನ್ನು ಬೇಗನೇ ಬಗೆಹರಿಸಬಹುದು. ಆದರೆ, ಕಠಿಣ ಅಥವಾ ಕ್ಲಿಷ್ಟಕರವಾಗಿರುವಂಥ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮೀನಮೇಷ ಎಣಿಸಬಹುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.