ADVERTISEMENT

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ: ಪರಿಷ್ಕೃತ ಮಾಸ್ಟರ್ ಪ್ಲಾನ್‌ಗೆ ಜಾಗತಿಕ ಟೆಂಡರ್

: ಆರು ತಿಂಗಳಲ್ಲಿ ಕರಡು ಪ್ರಕಟಿಸುವ ಗುರಿ

ಕೆ.ಎಸ್.ಸುನಿಲ್
Published 26 ಆಗಸ್ಟ್ 2025, 19:17 IST
Last Updated 26 ಆಗಸ್ಟ್ 2025, 19:17 IST
ಬಿಡಿಎ
ಬಿಡಿಎ   

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸ್ಥಳೀಯ ಯೋಜನಾ ಪ್ರದೇಶದ ಪರಿಷ್ಕೃತ ಮಾಸ್ಟರ್ ಪ್ಲಾನ್ – 2041 (ಆರ್‌ಎಂಪಿ–2041) ಸಿದ್ಧಪಡಿಸಲು ಜಾಗತಿಕ ಟೆಂಡರ್‌ ಕರೆದಿದೆ.

ನಗರದ ಭವಿಷ್ಯಕ್ಕಾಗಿ ಹೊಸ ಮತ್ತು ಸಮಗ್ರ ದೃಷ್ಟಿಕೋನ ಹೊಂದಿರುವ ಯೋಜನೆ ರೂಪಿಸಲಾಗುತ್ತಿದೆ. ಆರು ತಿಂಗಳಲ್ಲಿ ಆರ್‌ಎಂಪಿ–2041 ಕರಡು ಸಿದ್ಧಪಡಿಸುವ ಗುರಿ ಹೊಂದಿದ್ದು, ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಏಜೆನ್ಸಿ ಆಯ್ಕೆ ಮಾಡಲು ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್‌ 30 ಅಂತಿಮ ದಿನ.

ಹಿಂದಿನ ನ್ಯೂನತೆಗಳನ್ನು ಸರಿಪಡಿಸಿ, ನಗರದ ವಿಸ್ತರಣೆ, ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ನಿಯಂತ್ರಿಸಲು ಹೊಸ ಯೋಜನೆ ಭದ್ರಬುನಾದಿ ಹಾಕಲಿದೆ. ಪೂರ್ವಸಿದ್ಧತೆ ಪ್ರಕ್ರಿಯೆಯ ಭಾಗವಾಗಿ ಈ ಹಿಂದೆ ನೀಡಲಾದ ಟೆಂಡರ್ ಅಡಿ ಹೈಟೆಕ್ ತ್ರಿಡಿ ಡ್ರೋನ್ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆಯು ನಗರ ಮತ್ತು ಸುತ್ತಲಿನ ಪ್ರದೇಶಗಳ ವಿವರವಾದ ಪ್ರಾದೇಶಿಕ ಮತ್ತು ಭೌಗೋಳಿಕ ಮಾಹಿತಿ ಒದಗಿಸುವ ಗುರಿ ಹೊಂದಿದೆ.

ADVERTISEMENT

ಮಾಸ್ಟರ್‌ ಪ್ಲಾನ್‌ನ ಪ್ರಮುಖ ಅಂಶಗಳ ಪೈಕಿ ಸಂಚಾರ ಕೇಂದ್ರಿ ಅಭಿವೃದ್ಧಿ ಮಾದರಿ (ಟಿಒಡಿ) ಅಡಿ ಎಲ್ಲಾ ರೀತಿಯ ವಾಹನಗಳ ಸುಗಮ ಸಂಚಾರ, ವಿಶೇಷವಾಗಿ ಗುಣಮಟ್ಟದ ಸಾರಿಗೆ ವ್ಯವಸ್ಥೆ ರೂಪಿಸುವುದಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು, ಸುಲಲಿತವಾಗಿ ಜೀವನ ಸಾಗಿಸುವಿಕೆಗೆ ಬೇಕಾದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು ಯೋಜನೆಯ ಪ್ರಮುಖ ಅಂಶವಾಗಿದೆ.

ಮೂಲ ಯೋಜನೆಯ ಪ್ರಕಾರ, ಕರ್ನಾಟಕ ರಾಜ್ಯ ದೂರ ಸಂವೇದಿ ಕೇಂದ್ರವು ಡ್ರೋನ್ ಮೂಲಕ ಸಮೀಕ್ಷೆ ನಡೆಸಬೇಕಿತ್ತು. ಆದರೆ, ಸರ್ಕಾರ ಬದಲಾದ ಕಾರಣ ಖಾಸಗಿ ವಲಯಕ್ಕೆ ಸಮೀಕ್ಷಾ ಕಾರ್ಯ ವಹಿಸಲು ನಿರ್ಧರಿಸಿದೆ. ಸಮೀಕ್ಷಾ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ, ಬಳಕೆ ಅಧಿಕ ದಕ್ಷತೆ ಖಾತ್ರಿ ಪಡಿಸಲಾಗುತ್ತದೆ.  

ಬೆಂಗಳೂರು ನಗರ 1,240 ಚದರ ಕಿ.ಮೀ. ವಿಸ್ತೀರ್ಣವನ್ನು ಒಳಗೊಂಡಿದೆ. ಇದರೊಂದಿಗೆ, 87.50 ಚದರ ಕಿ.ಮೀ. ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ವ್ಯಾಪ್ತಿಯೂ ಸೇರಿ ಆರ್‌ಎಂಪಿ ಸಿದ್ಧವಾಗಲಿದೆ.  ಡ್ರೋನ್ ಸಮೀಕ್ಷೆಯು ಮಾಸ್ಟರ್‌ ಪ್ಲಾನ್ ರಚನೆಯನ್ನು ಬೆಂಬಲಿಸಲು ಮೂಲ ನಕ್ಷೆ, ಭೂ ಬಳಕೆಯ ನಕ್ಷೆ, ಡಿಜಿಟಲ್ ಎಲಿವೇಷನ್ ಮಾದರಿಯಂತಹ ಯೋಜನಾ ಸಾಧನಗಳನ್ನು ಒದಗಿಸುತ್ತದೆ.

‘ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ವಿಧಾನದ ಮೂಲಕ ಸಮೀಕ್ಷೆ ಕೈಗೊಳ್ಳಲಾಗುವುದು. ಕೃಷಿ, ವಸತಿ, ವಾಣಿಜ್ಯ ಉದ್ದೇಶಕ್ಕೆ ಬಳಸುವ ಜಮೀನು ಎಷ್ಟು ಹಾಗೂ ಸರ್ಕಾರಿ ಜಮೀನು ಎಷ್ಟು? ಎಂಬುದನ್ನು ಮೌಲ್ಯಮಾಪನ ಮಾಡುವ ಮೂಲಕ ಆರ್‌ಎಂಪಿ–2041 ಸಮಗ್ರವಾಗಿರುವುದನ್ನು ಖಾತರಿ ಪಡಿಸಲಾಗುವುದು. ಎಲ್ಲಾ ಭಾಗಿದಾರರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಮೂಲ ನಕ್ಷೆೆ ಈಗಾಗಲೇ ಸಿದ್ದವಾಗಿದ್ದು, ವಿವರವಾದ ಭೂಬಳಕೆಯ ನಕ್ಷೆೆ ರಚಿಸಬೇಕಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. 

‘ಕರಡು ಸಿದ್ಧವಾದ ನಂತರ, ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರಿಗೆ ಸಲಹೆಗಳನ್ನು ನೀಡಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 60 ದಿನಗಳ ಅವಕಾಶ ನೀಡಲಾಗುತ್ತದೆ. ಅಂತಿಮವಾಗಿ ಪ್ರಕಟಿಸುವ ಮೊದಲು ಈ ಮಾಹಿತಿಗಳನ್ನು ಪರಿಶೀಲಿಸಲಾಗುತ್ತದೆ. 2026ರ ಮಧ್ಯಭಾಗದ ವೇಳೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪಾರದರ್ಶಕತೆ ಮತ್ತು ಸಕಾಲಕ್ಕೆ ಅನುಷ್ಠಾನ ಖಚಿತಪಡಿಸಿಕೊಳ್ಳಲು ಪ್ರತಿ ಹಂತದಲ್ಲೂ ಮೇಲ್ವಿಚಾರಣೆ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.

ಕರಡು ಮಾಸ್ಟರ್ ಪ್ಲಾನ್ ತಯಾರಿಸಲು ಏಜೆನ್ಸಿಗೆ ಗರಿಷ್ಠ ನಾಲ್ಕು ತಿಂಗಳ ಅವಕಾಶ ನೀಡಲಾಗುವುದು. ಟೆಂಡರ್ ಅವಧಿ ಸೇರಿ ಆರು ತಿಂಗಳಲ್ಲಿ ಸಾರ್ವಜನಿಕ ಆಕ್ಷೇಪಣೆಗಾಗಿ ಕರಡು ಪ್ರಕಟಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.
ಎಲ್. ಶಶಿಕುಮಾರ್ ನಗರ ಯೋಜನಾ ಸದಸ್ಯ ಬಿಡಿಎ 

- ಮತ್ತೆ ಕಾನೂನು ಸವಾಲು?

ಕಟ್ಟಡಗಳು ವಿನ್ಯಾಸಗಳು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆಗಳನ್ನು ನೀಡಲು ಬಿಡಿಎ ಬಳಸುವ ಪ್ರಾಥಮಿಕ ದಾಖಲೆಯು ಮಾಸ್ಟರ್ ಪ್ಲಾನ್ ಆಗಿದೆ. ಪ್ರಸ್ತುತ ನಗರದಲ್ಲಿ 2005ರಲ್ಲಿ ಸಿದ್ದಪಡಿಸಲಾದ ಪರಿಷ್ಕೃತ ಮಾಸ್ಟರ್ ಪ್ಲಾನ್ 2015 ಬಳಕೆಯಲ್ಲಿದ್ದು ಇದನ್ನೇ 2025ರವರೆಗೆ ವಿಸ್ತರಿಸಲಾಗಿದೆ. 

ಪ್ರಾಧಿಕಾರವು 2017ರ ಡಿಸೆಂಬರ್‌ನಲ್ಲಿ ಮಾಸ್ಟರ್‌ ಪ್ಲಾನ್ 2031 ಪ್ರಕಟಿಸಿತ್ತು. ಆದರೆ ಸಂವಿಧಾನ 74ನೇ ತಿದ್ದುಪಡಿ ಅನ್ವಯ ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಈ ಯೋಜನೆ ಪರಿಷ್ಕರಿಸಬಹುದೇ ಹೊರತು ಬಿಡಿಎ ಅಲ್ಲ ಎಂಬ ಆಧಾರದ ಮೇಲೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಹಾಗಾಗಿ ಮಾಸ್ಟರ್‌ ಪ್ಲಾನ್‌ಗೆ ಹಿನ್ನಡೆಯಾಯಿತು.

ಇದರಿಂದ ಅನೇಕ ಕಾನೂನು ಸವಾಲು ಎದುರಿಸಬೇಕಾಯಿತು.  ಈಗಲೂ ಬಿಎಂಪಿಸಿ ರಚನೆಯಾಗದ ಕಾರಣ ಮಾಸ್ಟರ್‌ ಪ್ಲಾನ್‌ಗೆ ಮತ್ತೊಮ್ಮೆ ಕಾನೂನು ಸವಾಲು ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.