ADVERTISEMENT

ಶಾಸಕ ಎಂ.ಚಂದ್ರಪ್ಪ ಅವರಿಗೆ ಬಿಡಿಎ ನಿವೇಶನ: ನಿಯಮವಿದ್ದರೂ ಕ್ರಮ ಕೈಗೊಳ್ಳದ ಬಿಡಿಎ!

ಸಿ.ಎ ನಿವೇಶನ ಮಾರಾಟ: 11 ವರ್ಷವಾದರೂ ನಿರ್ಮಾಣವಾಗದ ಶಾಲೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:56 IST
Last Updated 17 ಸೆಪ್ಟೆಂಬರ್ 2022, 19:56 IST
ಎಂ.ಚಂದ್ರಪ್ಪ
ಎಂ.ಚಂದ್ರಪ್ಪ   

ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಅವರಿಗೆ ಬಿಡಿಎ ನಾಗರಿಕ ಸೌಕರ್ಯವುಳ್ಳ (ಸಿಎ) ನಿವೇಶನ ಮಾರಾಟ ಮಾಡಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರವು ಬಿಡಿಎ ಸಿಎ ನಿವೇಶನಗಳ ಹಂಚಿಕೆ ನಿಯಮ 1989ಕ್ಕೆ ತಂದಿರುವ ತಿದ್ದುಪಡಿಯ ಲೋಪಗಳು ಗೋಚರಿಸಿವೆ.

‘ಸರ್‌ ಎಂ. ವಿಶ್ವೇಶ್ವರಯ್ಯ ಲೇಔಟ್‌ನ 26,253 ಚದರ ಅಡಿ ನಿವೇಶನವನ್ನು ಟ್ರಸ್ಟ್‌ಗೆ 2011ರಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಶಾಲೆ ನಿರ್ಮಿಸುವುದಾಗಿ ಹೇಳಿ ಚಂದ್ರಪ್ಪ ಅವರು ನಿವೇಶನ ಪಡೆದಿದ್ದರು. 11 ವರ್ಷ ಕಳೆದರೂ ಶಾಲೆ ನಿರ್ಮಾಣ ಆಗಿರಲಿಲ್ಲ. ಕಳೆದ ವರ್ಷ ಅದೇ ಟ್ರಸ್ಟ್‌ಗೆ ನಿವೇಶನ ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದು, ನಿವೇಶನ ಹಂಚಿಕೆಯ ಉದ್ದೇಶ ವಿಫಲವಾದಂತಾಗಿದೆ. ನಿಯಮದಂತೆ 2 ವರ್ಷಗಳ ಅವಧಿಯಲ್ಲಿ ಮಂಜೂರು ಮಾಡಿದ ಉದ್ದೇಶಕ್ಕೆ ನಿವೇಶನ ಬಳಸದಿದ್ದರೆ ಅಂತಹ ನಿವೇಶನವನ್ನು ವಾಪಸ್‌ ಪಡೆಯುವ ಅಧಿಕಾರ ಬಿಡಿಎಗೆ ಇದೆ’ ಎನ್ನುತ್ತವೆ ಮೂಲಗಳು.

ಕೆಂಗೇರಿ ಉಪನಗರದಲ್ಲಿ ಬಿಡಿಎ ಸಿಎ ನಿವೇಶನವನ್ನು ದೇವರಾಜ ಅರಸು ಎಜ್ಯುಕೇಷನ್ ಸೊಸೈಟಿಗೆ ಶಾಲೆ ನಿರ್ಮಿಸಲು 2011ರಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ಕೊಡಲಾಗಿತ್ತು. ಒಂದು ವರ್ಷ ಮೊದಲು ಅದೇ ನಿವೇಶನವನ್ನು ಬಿಬಿಎಂಪಿಗೆ ಶಾಲೆ ನಿರ್ಮಾಣಕ್ಕೆ ಬಿಡಿಎ ಮಂಜೂರು ಮಾಡಿತ್ತು. ಬಿಬಿಎಂಪಿ ಶಾಲೆ ನಿರ್ಮಿಸದಿರುವ ಕಾರಣ ನಿವೇಶನ ವಾಪಸ್‌ ಪಡೆಯಲಾಗಿತ್ತು. 11 ವರ್ಷವಾದರೂ ದೇವರಾಜ ಅರಸು ಎಜುಕೇಷನ್ ಸೊಸೈಟಿ ಶಾಲೆ ನಿರ್ಮಿಸಿಲ್ಲ. ಬಿಡಿಎ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗೊತ್ತಾಗಿದೆ. ಜತೆಗೆ ಸರ್ಕಾರ ಲಿಖಿತ ಆದೇಶವಿಲ್ಲದೇ ₹10 ಕೋಟಿಗೆ ಆ ನಿವೇಶನ ಮಾರಾಟ ಮಾಡಿರುವುದು ಸಂಶಯ ಮೂಡಿಸಿದೆ.

ADVERTISEMENT

‘ಟ್ರಸ್ಟ್‌ನಲ್ಲಿ ಸೂಕ್ತ ಅನುದಾನವಿಲ್ಲದ ಕಾರಣಕ್ಕೆ ಶಾಲೆ ನಿರ್ಮಿಸಲು ಕಾಲಾವಕಾಶ ಕೇಳಲಾಗಿದೆ. ಇದೇ ಟ್ರಸ್ಟ್‌ ಚಿತ್ರದುರ್ಗದಲ್ಲಿ ನಡೆಸುತ್ತಿರುವ ಶಾಲೆಯಲ್ಲಿ 5 ಸಾವಿರ ಮಕ್ಕಳು ಕಲಿಯುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ಶಾಲೆ ನಿರ್ಮಿಸಲು ಮುಂದಾಗಿದ್ದೆವು. ಯಾವ ಅಕ್ರಮವನ್ನೂ ಮಾಡಿಲ್ಲ’ ಎಂದು ಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.