ADVERTISEMENT

ಬಿಡಿಎ: 5ನೇ ಹಂತದ ಇ–ಹರಾಜು ಮುಕ್ತಾಯ; 317 ನಿವೇಶನಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 16:00 IST
Last Updated 16 ಡಿಸೆಂಬರ್ 2020, 16:00 IST
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ)   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಭಿವೃದ್ಧಿ ಪಡಿಸಿರುವ ಬಡಾವಣೆಗಳ ನಿವೇಶನಗಳ ಐದನೇ ಹಂತದ ಇ– ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಐದನೇ ಹಂತದಲ್ಲಿ ಒಟ್ಟು 451 ನಿವೇಶನಗಳನ್ನು ಬಿಡಿಎ ಹರಾಜಿಗಿಟ್ಟಿತ್ತು. ಅವುಗಳಲ್ಲಿ ಒಟ್ಟು 317 ನಿವೇಶನಗಳು ಹರಾಜಾಗಿವೆ.

ನಿವೇಶನಗಳ ಇ ಹರಾಜಿನಿಂದ ಬಿಡಿಎಗೆ ನಿಗದಿಪಡಿಸಿದ್ದ ದರಕ್ಕಿಂತ ಶೇ 50.93ರಷ್ಟು ಹೆಚ್ಚು ವರಮಾನ ಬಂದಿದೆ. ಒಟ್ಟು 1,496 ಬಿಡ್ಡುದಾರರು ಭಾಗವಹಿಸಿದ್ದು, ಹರಾಜು ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿವೆ.

ಬಿಡಿಎ ನಿಗದಿಪಡಿಸಿದ ಮೂಲ ದರದ ಪ್ರಕಾರ 317 ನಿವೇಶನಗಳ ಹರಾಜಿನಿಂದ ₹ 184.57 ಕೋಟಿ ವರಮಾನ ನಿರೀಕ್ಷಿಸಲಾಗಿತ್ತು. ಈ ನಿವೇಶನ ಹರಾಜಿನಿಂದ ಒಟ್ಟು ₹ 278.58 ಕೋಟಿ ವರಮಾನವನ್ನು ಬಿಡಿಎ ಗಳಿಸಲಿದೆ.

ADVERTISEMENT

ನಿರೀಕ್ಷಿಸಿದಷ್ಟು ಮೊತ್ತಕ್ಕೆ ಬೇಡಿಕೆ ಕುದುರದ ಕಾರಣ 25 ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಬಿಡಿಎ ಹಿಂಪಡೆದಿದೆ. ಹರಾಜಿಗೆ ಇಟ್ಟಿದ್ದ 109 ನಿವೇಶನಗಳಿಗೆ ಯಾವುದೇ ಬೇಡಿಕೆ ಬಂದಿಲ್ಲ.

ನಾಲ್ಕನೇ ಹಂತದ ಇ–ಹರಾಜು ಪ್ರಕ್ರಿಯೆಯಲ್ಲಿ ಬಿಡಿಎ 448 ನಿವೇಶನಗಳಲ್ಲಿ 332 ನಿವೇಶನಗಳು ಬಿಕರಿಯಾಗಿದ್ದವು. 99 ನಿವೇಶನಗಳಿಗೆ ಯಾವುದೇ ಬೇಡಿಕೆ ಬಂದಿರಲಿಲ್ಲ. ಈ ಹಂತದಲ್ಲಿ ಹರಾಜಿಗಿಟ್ಟಿದ್ದ ನಿವೇಶನಗಳ ಒಟ್ಟು ಮೂಲ ಬೆಲೆ ₹ 171.95 ಕೋಟಿಯಷ್ಟಿತ್ತು. ಹರಾಜಿನಿಂದ ಒಟ್ಟು ಸರಾಸರಿ ಶೇ 63.61ರಷ್ಟು (₹ 281.32 ಕೋಟಿ) ಹೆಚ್ಚು ವರಮಾನವನ್ನು ಪ್ರಾಧಿಕಾರ ಗಳಿಸಿತ್ತು.

ಮೂರನೇ ಹಂತದಲ್ಲಿ ಒಟ್ಟು 402 ನಿವೇಶನಗಳನ್ನು ಬಿಡಿಎ ಇ-ಹರಾಜಿಗೆ ಇಟ್ಟಿತ್ತು. ಮಾರ್ಗಸೂಚಿ ದರ ಕಡಿಮೆ ಇದ್ದ 40 ನಿವೇಶನಗಳನ್ನು ಇ– ಹರಾಜಿನಿಂದ ಹಿಂಪಡೆದಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 286 ನಿವೇಶನಗಳು ಮಾತ್ರ ಮಾರಾಟವಾಗಿದ್ದವು. 55 ನಿವೇಶನಗಳಿಗೆ ಬೇಡಿಕೆ ಬಂದಿರಲಿಲ್ಲ. ಮೂರನೇ ಹಂತದಲ್ಲಿ ಮಾರಾಟವಾದ ನಿವೇಶನಗಳ ಒಟ್ಟು ಮೂಲದರ ₹ 180.46 ಕೋಟಿಗಳಷ್ಟಿತ್ತು. ಇ ಹರಾಜಿನಲ್ಲಿ ಸರಾಸರಿ ಶೇ 47.58ರಷ್ಟು ಹೆಚ್ಚು ವರಮಾನ (ಒಟ್ಟು ₹ 266.33 ಕೋಟಿ) ಗಳಿಸಿತ್ತು.

ಸರ್ಕಾರದ ಸೂಚನೆ ಮೇರೆಗೆ ಸುಮಾರು 7 ಸಾವಿರ ನಿವೇಶನಗಳನ್ನು ಹರಾಜು ಮಾಡುವ ಉದ್ದೇಶವನ್ನು ಬಿಡಿಎ ಹೊಂದಿದೆ. ಐದು ಹಂತಗಳಲ್ಲಿ ಸುಮಾರು 1,700 ನಿವೇಶನಗಳನ್ನು ಇ–ಹರಾಜಿಗೆ ಇಟ್ಟಿದ್ದು, ಇದರಲ್ಲಿ 1200 ನಿವೇಶನಗಳು ಬಿಕರಿಯಾಗಿವೆ.

ಐದನೇ ಹಂತದ ಇ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಆರನೇ ಹಂತದ ಹರಾಜು ಪ್ರಕ್ರಿಯೆಗೆ ಪ್ರಾಧಿಕಾರದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.