ADVERTISEMENT

ನಗರ ಮಹಾ ಯೋಜನೆ: ಬಿಎಂಪಿಸಿ ರೂಪಿಸಲಿ - ನಗರ ಯೋಜನೆ ತಜ್ಞರು

ನಗರ ಯೋಜನಾ ತಜ್ಞರು, ಆರ್‌ಡಬ್ಲ್ಯುಎಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 19:42 IST
Last Updated 16 ಫೆಬ್ರುವರಿ 2022, 19:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಪರಿಷ್ಕೃತ ನಗರ ಮಹಾಯೋಜನೆ (ಆರ್‌ಎಂಪಿ) 2041 ಸಿದ್ಧಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸಲಹಾಸಂಸ್ಥೆಗಳ ಆಯ್ಕೆಗೆ ಟೆಂಡರ್‌ ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಪ್ರಾಧಿಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ನಗರ ಯೋಜನೆ ತಜ್ಞರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗಳು (ಆರ್‌ಡಬ್ಲ್ಯುಎ) ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನದವರು (ಎನ್‌ಬಿಎಫ್‌) ಬೆಂಗಳೂರು ಮಹಾನಗರ ಯೋಜನಾ ಸಮಿತಿಯೇ (ಬಿಎಂಪಿಸಿ) ನಗರ ಮಹಾಯೋಜನೆಯನ್ನು ರೂಪಿಸಬೇಕೇ ವಿನಃ ಬಿಡಿಎ ಅಥವಾ ಇತರ ಯಾವುದೇ ಸಂಸ್ಥೆಗಳಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್‌ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌, ‘ನಗರ ಮಹಾಯೋಜನೆ 2041 ನಗರದ ಅಭಿವೃದ್ಧಿ ಮತ್ತು ಬೆಳವಣಿಗೆಯ ಕುರಿತು ವಿಸ್ತೃತ ಚೌಕಟ್ಟನ್ನು ಹೊಂದಿರಬೇಕು. ನಗರಾಡಳಿತಕ್ಕಾಗಿ ಸ್ಥಳೀಯ ಆಡಳಿತ ಸಂಸ್ಥೆಗಳ ಒಂದು ಅಂಗಸಂಸ್ಥೆಯಾದ ಬಿಎಂಪಿಸಿಯನ್ನೂ ಇದರ ಸಿದ್ಧತೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳ
ಬೇಕು. ನಗರ ಮತ್ತು ಪಟ್ಟಣ ಯೋಜನೆ ರೂಪಿಸಲು ನೆರವಾಗುವ ಅಧಿಕಾರವನ್ನು ಸಂವಿಧಾನದ 74ನೇ ತಿದ್ದುಪಡಿಯ ಪ್ರಕಾರ ಬಿಎಂಪಿಸಿಗೆ ನೀಡಲಾಗಿದೆ. ನಗರದ ಅಭಿವೃದ್ಧಿ ಕಾರ್ಯಗಳು ಸಹಜ ಮತ್ತು ಪ್ರಾಮಾಣಿಕವಾಗಿ ನಡೆಯಲು ಸಾಧ್ಯವಾಗುವಂತೆ ಹತ್ತು ವರ್ಷಗಳ ಯೋಜನೆಯನ್ನು ರೂಪಿಸುವಂತೆ 1961ರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯೂ ಸೂಚಿಸಿದೆ. ನಗರ ಮಹಾಯೋಜನೆ ಮತ್ತು ಪ್ರಾದೇಶಿಕ ಯೋಜನೆಗಳು ಪರಸ್ಪರ ಪೂರಕವಾಗಿದ್ದು, ಯೋಜನೆ ಜಾರಿಗೆ ಜಂಟಿ ಪ್ರಯತ್ನಕ್ಕೆ ನೆರವಾಗುತ್ತವೆ’ ಎಂದು ಅಭಿಪ್ರಾಯ‍ಪಟ್ಟರು.

ADVERTISEMENT

ಸಿಟಿಜನ್ಸ್ ಆ್ಯಕ್ಷನ್‌ ಫೋರಂನ ವಿಜಯನ್‌ ಮೆನನ್‌, ‘ಸಾಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿಯೂ ವಿಫಲವಾಗಿರುವ ನಗರ ಮಹಾ ಯೋಜನೆಯಂತಹ ಹೊಣೆರಹಿತ ಪ್ರಕ್ರಿ
ಯೆಗಳಿಗೆ ಬಿಡಿಎ ಮತ್ತು ಸರ್ಕಾರ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿವೆ’ ಎಂದು ಆರೋಪಿಸಿದರು.

ಬೆಂಗಳೂರು ಪ್ರಜಾ ವೇದಿಕೆಯ ಅಧ್ಯಕ್ಷ ಡಿ.ಎಸ್‌. ರಾಜಶೇಖರ್‌, ‘ಪರಿಷ್ಕೃತ ನಗರ ಮಹಾಯೋಜನೆ 2031 ರೂಪಿಸಿದ ಸಲಹಾ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ವ್ಯಯ ಮಾಡಿದ್ದಕ್ಕೆ ಯಾರು ಹೊಣೆ. ತೆರಿಗೆದಾರರ ಈ ಹಣವನ್ನು ಹೇಗೆ ವಸೂಲಿ ಮಾಡಲಾಗುತ್ತದೆ ಎಂಬುದನ್ನು ಕೇಳಬೇಕಾಗುತ್ತದೆ’ ಎಂದರು.

‘ಆರ್‌ಎಂಪಿಯನ್ನು ಬಿಎಂಪಿಸಿ ರೂಪಿಸಬೇಕೇ ವಿನಃ ಬಿಡಿಎ ಅಲ್ಲ. ಅಂತಿಮವಾಗಿ ಬೆಂಗಳೂರಿನ ನಾಗರಿಕರ ಮೇಲೆಯೇ ಇದು ಪರಿಣಾಮ ಬೀರುವು
ದರಿಂದ ಅವರ ಸಲಹೆಗಳನ್ನು ಏಕೆ ಪಡೆದಿಲ್ಲ. ಬಿಡಿಎಯ ಈ ಕ್ರಮಕ್ಕೆ ಒಪ್ಪಿಗೆ ಸೂಚಿಸಿದ ಸಂಸ್ಥೆಗಳು ಯಾವುವು ಎಂಬುದನ್ನೂ ನಾವು ತಿಳಿಯಬೇಕು’ ಎಂದರು.

‘ತಜ್ಞರನ್ನು ಒಳಗೊಂಡ ಬಿಎಂಪಿಸಿ ರಚಿಸಿ’

‘ಒಂದು ನಗರವಾಗಿ ಸಮಗ್ರ ಅಭಿವೃದ್ಧಿ ಕಾಣುವಲ್ಲಿ ಬೆಂಗಳೂರು ಯಶಸ್ವಿ ಆಗಿಲ್ಲ. ವ್ಯಾಪಕ ಭ್ರಷ್ಟಾಚಾರ ಮತ್ತು ಬಿಡಿಎ, ಬಿಬಿಎಂಪಿ, ಜಲಮಂಡಳಿಯಂತಹ ಸಂಸ್ಥೆಗಳ ವೈಫಲ್ಯಗಳೇ ಇದಕ್ಕೆ ಕಾರಣ. ಆರ್‌ಎಂಪಿ 2041 ಸಿದ್ಧಪಡಿಸುವ ಹೊಣೆಯನ್ನು ಮತ್ತೆ ಬಿಡಿಎಗೆ ವಹಿಸಿದ್ದು ದುರಂತ. ರಾಜ್ಯ ಸರ್ಕಾರವು ಸಂವಿಧಾನದ 74ನೇ ತಿದ್ದುಪಡಿಯನ್ವಯ ಕ್ರಮ ಕೈಗೊಳ್ಳಬೇಕು. ಅಗತ್ಯ ತಜ್ಞರನ್ನೊಳಗೊಂಡ ಬಿಎಂಪಿಸಿಯನ್ನು ರಚಿಸಬೇಕು’ ಎಂದು ವರ್ತೂರು ರೈಸಿಂಗ್‌ ಸಂಘಟನೆಯ ಜಗದೀಶ ರೆಡ್ಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.