ADVERTISEMENT

ಬಿಬಿಎಂಪಿಗೆ ಬಿಡಿಎ ಉದ್ಯಾನಗಳ ಹಸ್ತಾಂತರ ಶೀಘ್ರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 18:03 IST
Last Updated 5 ಜನವರಿ 2021, 18:03 IST
ಉದ್ಯಾನದಲ್ಲಿ ಅಳವಡಿಸಲಾಗಿರುವ ವ್ಯಾಯಾಮ ಸಾಧನಗಳು–ಸಾಂದರ್ಭಿಕ ಚಿತ್ರ
ಉದ್ಯಾನದಲ್ಲಿ ಅಳವಡಿಸಲಾಗಿರುವ ವ್ಯಾಯಾಮ ಸಾಧನಗಳು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನಗಳನ್ನು ಹಂತ ಹಂತವಾಗಿ ಬಿಬಿಎಂಪಿಗೆ ಹಸ್ತಾಂತರ ಮಾಡಲು ನಿರ್ಧರಿಸಿದೆ.

ಪ್ರಾಧಿಕಾರದ ತೋಟಗಾರಿಕೆ ಮತ್ತು ಅರಣ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಮಂಗಳವಾರ ಈ ಕುರಿತು ಸಮಾಲೋಚನೆ ನಡೆಸಿದರು.

‘ಈಗಾಗಲೇ ಅಭಿವೃದ್ಧಿಪಡಿಸಿರುವ ಕೆಲವು ಉದ್ಯಾನಗಳನ್ನು ಪ್ರಾಧಿಕಾರವೇ ನಿರ್ವಹಣೆ ಮಾಡುತ್ತಿದೆ. ಇವುಗಳನ್ನು ಹಂತಹಂತವಾಗಿ ಬಿಬಿಎಂಪಿಗೆ ಹಸ್ತಾಂತರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ. ಉದ್ಯಾನ ನಿರ್ಮಾಣಕ್ಕಾಗಿ ಬಿಡಿಎ ಗೊತ್ತುಪಡಿಸಿದ ಜಾಗಗಳನ್ನೂ ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತದೆ. ಈ ಕುರಿತು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ವಿಶ್ವನಾಥ್‌ ಸೂಚಿಸಿದರು.

ADVERTISEMENT

‘ಉದ್ಯಾನಗಳ ಹಸ್ತಾಂತರದ ಕುರಿತು ಸದ್ಯದಲ್ಲೇ ಬಿಬಿಎಂಪಿ ಆಯುಕ್ತರ ಜೊತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುತ್ತದೆ’ ಎಂದರು.

ಟ್ರೀ–ಪಾರ್ಕ್ ನಿರ್ಮಾಣ: ’ಇನ್ನು ಮುಂದೆ ಬಿಡಿಎ ಬಡಾವಣೆಗಳಲ್ಲಿ ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಮಾಮೂಲಿ ಉದ್ಯಾನದ ಬದಲು ಟ್ರೀ–ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ದೀರ್ಘಕಾಲ ಉಳಿಯುವ ಮರಗಳನ್ನು ಬೆಳೆಸಲು ಆದ್ಯತೆ ನೀಡಲಾಗುತ್ತದೆ. ಪಾದಚಾರಿ ಮಾರ್ಗ, ವಾಯುವಿಹಾರ ಪಥ, ಜನ ಕುಳಿತುಕೊಳ್ಳಲು ಬೆಂಚುಗಳನ್ನು ನಿರ್ಮಿಸಲಾಗುತ್ತದೆ. ಜಾಗದ ಲಭ್ಯತೆ ನೋಡಿಕೊಂಡು ಮಕ್ಕಳ ಚಟುವಟಿಕೆಗೂ ಸೌಕರ್ಯ ಕಲ್ಪಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

‘ನಾಗರಿಕ ಸೌಕರ್ಯದ ಜಾಗ ಅನ್ಯಉದ್ದೇಶಕ್ಕೆ ಬಳಸುವಂತಿಲ್ಲ’

‘ಬಿಡಿಎಯಿಂದ ಅನುಮೋದನೆ ಪಡೆದ ಬಡಾವಣೆಗಳಲ್ಲಿ ನಾಗರಿಕ ಸೌಕರ್ಯ ಕಲ್ಪಿಸುವ ಉದ್ದೇಶಕ್ಕೆ ಮೀಸಲಿಟ್ಟ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಖಾಸಗಿ ಬಡಾವಣೆಗಳು ಹಾಗೂ ವಸತಿ ಸಹಕಾರ ಸಂಘಗಳು ಈ ರೀತಿ ಅಕ್ರಮವೆಸಗಿದರೆ ಅವುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಂತಹ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.