ADVERTISEMENT

ಶಿವರಾಮ ಕಾರಂತ ಬಡಾವಣೆ: ಮತ್ತೆ 480 ಕಟ್ಟಡ ಸಕ್ರಮ– 13ರಿಂದ ಪ್ರಮಾಣಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 14:28 IST
Last Updated 12 ಮೇ 2022, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿ ಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಗೆ ಅಧಿಸೂಚನೆ ಹೊರಡಿಸಲಾದ ಪ್ರದೇಶದಲ್ಲಿ ಮತ್ತೆ 480 ಕಟ್ಟಡಗಳನ್ನು ಸಕ್ರಮಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಈವರೆಗೆ ಒಟ್ಟು 2,825 ಕಟ್ಟಡಗಳನ್ನು ಸಕ್ರಮಗೊಳಿಸಿದಂತಾಗಿದೆ.

2018 ಕ್ಕಿಂತ ಮುಂಚೆ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದುಕಟ್ಟಡ ಕಟ್ಟಿರುವ ಜಮೀನು ಮಾಲೀಕರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ನ್ಯಾ.ಎ.ವಿ. ಚಂದ್ರಶೇಖರ್ ಸಮಿತಿ 14ನೆಯ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಇದನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್‌ ಈ ಕುರಿತು ಆದೇಶಿಸಿದೆ.

ನ್ಯಾಯಾಲಯದ ಆದೇಶದಂತೆ ಈ ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲೀಕರಿಗೆ ನ್ಯಾ.ಎ.ವಿ. ಚಂದ್ರಶೇಖರ್ ಸಮಿತಿ ನೇತೃತ್ವದಲ್ಲಿ ಬಿಡಿಎಯು ಸಕ್ರಮ ಪ್ರಮಾಣಪತ್ರವನ್ನು ವಿತರಿಸಬೇಕು. ಈ ಮಾಲೀಕರಿಗೆ ಕಾನೂನುಬದ್ಧವಾಗಿ ಸುಧಾರಣಾ ಶುಲ್ಕ ವಿಧಿಸಬೇಕು ಎಂದೂ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ADVERTISEMENT

ಪ್ರಾಧಿಕಾರವು ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಇದೇ 13ರಿಂದ (ಶುಕ್ರವಾರ) ಕಟ್ಟಡಗಳ ಮಾಲೀಕರಿಗೆ ಸಕ್ರಮ ಪ್ರಮಾಣಪತ್ರವನ್ನು ವಿತರಿಸಲಿದೆ. ಸಕ್ರಮ ಪ್ರಮಾಣಪತ್ರವನ್ನು ಪಡೆಯಲು ಫಲಾನುಭವಿಗಳು ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್‌ಕಾರ್ಡ್, ಸಮಿತಿಯಿಂದ ಬಂದಿರುವ ಎಸ್.ಎಂ.ಎಸ್., ಸಮಿತಿಯು ನೀಡಿರುವ ರಸೀದಿಯನ್ನು ಸಲ್ಲಿಸಬೇಕು ಎಂದು ನ್ಯಾ.ಎ.ವಿ.ಚಂದ್ರಶೇಖರ್ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.