ADVERTISEMENT

ಕೆಳ ಸೇತುವೆ ಕಾಮಗಾರಿಗೆ ಬಿಡದ ಗ್ರಹಣ!

ಕಂಠೀರವ ಸ್ಟುಡಿಯೋ ಎದುರಿನ ಕೆಳ ಸೇತುವೆ ಕಾಮಗಾರಿ ನನೆಗುದಿಗೆ

ವಿಜಯಕುಮಾರ್ ಎಸ್.ಕೆ.
Published 3 ಫೆಬ್ರುವರಿ 2022, 17:09 IST
Last Updated 3 ಫೆಬ್ರುವರಿ 2022, 17:09 IST
ಕಂಠೀರವ ಸ್ಟುಡಿಯೋ ಎದುರು ಅಂಡರ್ ಪಾಸ್ ನಿರ್ಮಿಸುವ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವುದು - ಪ್ರಜಾವಾಣಿ ಚಿತ್ರ/ಅನೂಪ್‌ ರಾಘ.ಟಿ.
ಕಂಠೀರವ ಸ್ಟುಡಿಯೋ ಎದುರು ಅಂಡರ್ ಪಾಸ್ ನಿರ್ಮಿಸುವ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವುದು - ಪ್ರಜಾವಾಣಿ ಚಿತ್ರ/ಅನೂಪ್‌ ರಾಘ.ಟಿ.   

ಬೆಂಗಳೂರು: ವಾಹನ ಸಂಚಾರಕ್ಕೆ ಅನುಕೂಲ ಆಗಬೇಕಿದ್ದ ಅಂಡರ್ ಪಾಸ್ ಕಾಮಗಾರಿ ಅರ್ಧಕ್ಕೆ ನಿಂತು ಒಂಬತ್ತು ವರ್ಷಗಳೇ ಆಗಿವೆ. ಕಂಠೀರವ ಸ್ಟುಡಿಯೋ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಹೊರಟಿದ್ದ ಕಾಮಗಾರಿ ಸ್ಥಗಿತಗೊಂಡು ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.

ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಸಿಗ್ನಲ್ ರಹಿತ ವಾಹನ ಸಂಚಾರಕ್ಕೆ ಅನುಕೂಲ ಆಗುವಂತೆ ನಿರ್ಮಿಸಿದ್ದ ಅಂಡರ್ ಪಾಸ್ ಈಗ ಕಸ ಸುರಿಯುವ ತಾಣವಾಗಿ ಮಾರ್ಪಟ್ಟಿದೆ. ಈ ಕಾಮಗಾರಿಗೆ ಅಗತ್ಯ ಇರುವ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಅನುದಾನ ಲಭ್ಯವಾಗದ ಕಾರಣಕ್ಕೆ ಕಾಮಗಾರಿ ನಿಂತಲ್ಲೇ ನಿಂತಿದೆ.

ಈ ಕೆಳಸೇತುವೆಯ ಒಂದು ಬದಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಕ್ಕೆ ಒಳಪಟ್ಟರೆ, ಮತ್ತೊಂದು ಬದಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತಿದೆ. 2013-14ರಲ್ಲಿ ಈ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದಕ್ಕಾಗಿ ₹18 ಕೋಟಿ ಅನುದಾನ ನಿಗದಿ ಮಾಡಲಾಗಿದ್ದು, ಅದರಲ್ಲಿ ₹8 ಕೋಟಿಯಷ್ಟು ಖರ್ಚಾಗಿದೆ. ಅಷ್ಟಕ್ಕೆ ಕಾಮಗಾರಿ ಸ್ಥಗಿತಗೊಂಡು ಒಂಬತ್ತು ವರ್ಷಗಳೇ ಕಳೆದಿವೆ.

ADVERTISEMENT

‘28 ಮನೆಗಳನ್ನು ಸ್ವಾಧೀನ ಮಾಡಿಕೊಂಡು ಶೇ 50ರಷ್ಟು ನಗದು ಪರಿಹಾರ ಮತ್ತು ಬದಲಿ ನಿವೇಶನ ಒದಗಿಸಲು ತೀರ್ಮಾನಿಸಲಾಗಿತ್ತು. ನಗದು ಪರಿಹಾರ ವಿತರಿಸಿದ ಬಿಡಿಎ, ಬದಲಿ ನಿವೇಶನ ಒದಗಿಸಲಿಲ್ಲ. ಹೀಗಾಗಿ, ಕಾಮಗಾರಿ ಮುಂದುವರಿಸಲು ಸಾಧ್ಯವಾಗಿಲ್ಲ. ಬಿಡಿಎ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯೇ ಕೆಳ ಸೇತುವೆ ಕಾಮಗಾರಿ ಸ್ಥಗಿತಗೊಳ್ಳಲು ಕಾರಣ’ ಎನ್ನುತ್ತಾರೆ ಸ್ಥಳೀಯರು.

ಈ ಕಾಮಗಾರಿ ಪೂರ್ಣಗೊಂಡಿದ್ದರೆ ಸಿಗ್ನಲ್ ರಹಿತ ವಾಹನ ಸಂಚಾರಕ್ಕೆ ಅನುಕೂಲ ಆಗುತ್ತಿತ್ತು. ಆದರೆ, ಈಗ ವಾಹನಗಳ ಸಂಚಾರಕ್ಕೆ ಇದೇ ಅಂಡರ್‌ ಪಾಸ್ ಅಡಚಣೆಯಾಗಿ ಪರಿಣಮಿಸಿದೆ. ಮಹಾಲಕ್ಷ್ಮೀ ಲೇಔಟ್, ನಂದಿನಿ ಲೇಔಟ್ ಕಡೆಯಿಂದ ಬರುವ ವಾಹನಗಳು ಗೊರಗುಂಟೆಪಾಳ್ಯ ಕಡೆಗೆ ಬಲ ತಿರುವು ಪಡೆಯಬೇಕೆಂದರೆ ಸುತ್ತಾಡಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಪೀಣ್ಯ ಕೈಗಾರಿಕಾ ಪ್ರದೇಶದಿಂದ ಮಹಾಲಕ್ಷ್ಮೀ ಲೇಔಟ್ ಕಡೆಗೆ ಬರಬೇಕಾದ ಮತ್ತು ವಾಪಸ್ ಹೋಗಬೇಕಾದ ವಾಹನಗಳೂ ಸಂಚಾರ ದಟ್ಟಣೆ ಸೀಳಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಸುತ್ತು ಬಳಸಿ ಹಾದಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ವಾಹನಗಳಿಗೆ ಸಂಚಾರ ಪೊಲೀಸರಿಂದ ದಂಡ ಬೀಳುವುದು ಗ್ಯಾರಂಟಿ. ಕಾಮಗಾರಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿರುವ ಬಿಡಿಎ ಮಾಡಿರುವ ತಪ್ಪಿನಿಂದ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿದೆ. ಸುತ್ತು ಬಳಸು ಹಾದಿ ಕ್ರಮಿಸಲು ವಾಹನ ಸವಾರರೂ ದುಬಾರಿ ದರದ ಇಂಧನ ಖರ್ಚು ಮಾಡಬೇಕಾದ ಅನಿವಾರ್ಯತೆಯೂ ಇದೆ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.

‘ಪೂರ್ವ ಸಿದ್ಧತೆ ಇಲ್ಲದ ಯೋಜನೆ’

ಸಾರ್ವಜನಿಕರಿಗೆ ಅನುಕೂಲ ಮಾಡುವ ಬದಲು ಈ ಸೇತುವೆ ಅನಾನುಕೂಲ ತಂದೊಡ್ಡಿದೆ. ಸರ್ಕಾರ ಖರ್ಚು ಮಾಡಿದ ಹಣ ಹಲವು ವರ್ಷಗಳಿಂದ ಪೋಲಾಗಿದೆ. ವಾಹನಗಳನ್ನು ಸುತ್ತು ಬಳಸಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಸಮಗ್ರ ಯೋಜನೆ ರೂಪಿಸಿಕೊಳ್ಳದೆ, ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಕಾಮಗಾರಿ ಆರಂಭಿಸಿದ್ದೇ ಇದಕ್ಕೆ ಕಾರಣ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕು.

–ಶ್ರೀಕಾಂತ್ ಚನ್ನಾಳ್, ಅಸೋಷಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಸಂಸ್ಥೆಯ ಬೆಂಗಳೂರು ಕೇಂದ್ರದ ಅಧ್ಯಕ್ಷ

‘ಬಾಕಿ ಪರಿಹಾರಕ್ಕೆ ಅಗತ್ಯ ಕ್ರಮ’

ಉಳಿದ ಕಾಮಗಾರಿಗೆ ಅನುಮೋದನೆ ದೊರೆತಿದೆ. ಪರಿಹಾರ ನೀಡಲು ಹಣ ಇಲ್ಲ ಎಂಬ ಕಾರಣಕ್ಕೆ ಕಾಮಗಾರಿ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಶೇ 50ರಷ್ಟು ಬಾಕಿ ಪರಿಹಾರ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಳಿದ ಕಾಮಗಾರಿ ನಡೆಸಲು ಬಿಡಿಎ ಆಡಳಿತ ಮಂಡಳಿ ಸಭೆಯಲ್ಲೂ ಅನುಮೋದನೆ ದೊರೆತಿದೆ.

–ಕೆ.ಗೋಪಾಲಯ್ಯ, ಅಬಕಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.