ADVERTISEMENT

ಪಾಲಿಕೆ ಅಧಿಕಾರಿಗಳೇ ಜೈಲಿಗೆ ಹೋಗಲು ಸಿದ್ಧರಾಗಿ: ಹೈಕೋರ್ಟ್‌ ಎಚ್ಚರಿಕೆ

ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 20:29 IST
Last Updated 15 ಫೆಬ್ರುವರಿ 2022, 20:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ಹೈಕೋರ್ಟಿನ ಅಂಗಳ
ದಿಂದಲೇ ನೇರವಾಗಿ ಜೈಲಿಗೆ ಕಳುಹಿಸಲಾಗುವುದು. ಜೈಲಿಗೆ ಹೋಗಲು ಗಂಟು ಮೂಟೆ ಕಟ್ಟಿಕೊಂಡು ಸಿದ್ಧರಾಗಿ ಬರುವಂತೆ ನಿಮ್ಮ ಅಧಿಕಾರಿಗಳಿಗೆ ಮಾಹಿತಿ ನೀಡಿ’ ಎಂದು ಬಿಬಿಎಂಪಿ ಪರ ವಕೀಲರಿಗೆ ಹೈಕೋರ್ಟ್‌ ಖಡಕ್‌ ಎಚ್ಚರಿಕೆ ನೀಡಿದೆ.

‘ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನುಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಜೈಲಿಗೆ ಹೋಗಲು ಏನೇನು ಬೇಕೋ ಅಂತಹ ಬ್ಯಾಗು ಹಾಗೂ ಅಗತ್ಯ ವಸ್ತುಗಳೊಂದಿಗೆ ಸಿದ್ಧರಾಗಿ ಬರುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ. ಈ ಬಾರಿ ನಿಮ್ಮ ಅಧಿಕಾರಿಗಳನ್ನು ಖಂಡಿತವಾಗಿಯೂ ಹೈಕೋರ್ಟ್‌ ಅಂಗಳದಿಂದಲೇ ಸೀದಾ ಜೈಲಿಗೆ ಅಟ್ಟಲಾಗುವುದು. ಹೈಕೋರ್ಟ್ ಎಂದರೆ ಏನು ಎಂಬುದನ್ನು ಈ ಅಧಿಕಾರಿಗಳಿಗೆ ಮನಗಾಣಿಸಬೇಕಿದೆ. ಕೋರ್ಟ್ ಆದೇಶ ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದನ್ನೂ ಅವರಿಗೆಲ್ಲಾ ತಿಳಿಸಬೇಕಿದೆ’ ಎಂದು ಕಟುವಾಗಿ ನುಡಿಯಿತು.

ADVERTISEMENT

‘ನ್ಯಾಯಾಲಯ ನಮ್ಮನ್ನು ಜೈಲಿಗೆ ಕಳುಹಿಸಲಿ ಎಂದು ಕೆಲ ಬಿಬಿಎಂಪಿಯ ಅಧಿಕಾರಿಗಳು ಬಯಸುತ್ತಿದ್ದಾ
ರೇನೊ’ ಎಂದು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಬಿಬಿಎಂಪಿ ಆಯುಕ್ತರೂ ಜೈಲಿಗೆ ಹೋಗಲಿ’ ಎಂದು ಮೌಖಿಕವಾಗಿ ನುಡಿಯಿತು.

‘ಕೋರ್ಟ್‌ ನಿರ್ಬಂಧವಿದ್ದರೂ ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ’ ಎಂಬ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಹೇಳಿಕೆಗೆ ವ್ಯಗ್ರವಾದ ನ್ಯಾಯಪೀಠ,‘ಈ ಪ್ರಕರಣದಲ್ಲಿ ತ್ಯಾಜ್ಯ ವಿಲೇವಾರಿಗೆಅವಕಾಶ ನೀಡಿರುವ ಪಾಲಿಕೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು’ ಎಂದು ತಾಕೀತು ಮಾಡಿದ್ದು, ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.