ADVERTISEMENT

ಮಹಿಳೆಯರ ರಕ್ಷಣೆಗಾಗಿ ‘ಬಿ.ಸೇಫ್ ಕ್ಷೇತ್ರ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 22:53 IST
Last Updated 30 ನವೆಂಬರ್ 2020, 22:53 IST

ಬೆಂಗಳೂರು: ಬಿ-ಪ್ಯಾಕ್ ಹಾಗೂ ಸಿಜಿಐ ಸಂಸ್ಥೆಗಳ ಸಹಯೋಗದಲ್ಲಿ ಮಹದೇವಪುರ ಹಾಗೂ ಶಿವಾಜಿನಗರ ಕ್ಷೇತ್ರಗಳಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ ‘ಬಿ.ಸೇಫ್ ಕ್ಷೇತ್ರ’ ಕಾರ್ಯಕ್ರಮಕ್ಕೆ ಶಾಸಕರಾದ ಅರವಿಂದ ಲಿಂಬಾವಳಿ ಹಾಗೂ ರಿಜ್ವಾನ್ ಅರ್ಷದ್ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅರವಿಂದ ಲಿಂಬಾವಳಿ, ‘ಸಾರ್ವಜನಿಕ ಸ್ಥಳಗಳು ಹಾಗೂ ಮನೆಯೊಳಗೆ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಸಮಾಜದಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅವಶ್ಯಕ.ಈ ಕಾರ್ಯಕ್ರಮ ಮಹಿಳೆಯರಿಗೆ ರಕ್ಷಾಕವಚದಂತೆ ಕಾರ್ಯನಿರ್ವಹಿಸಲಿದೆ’ ಎಂದರು.

‘ಶಿವಾಜಿನಗರ ವ್ಯಾಪ್ತಿಯಲ್ಲಿ ಉದ್ಯೋಗನಿರತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಕಾರ್ಯಕ್ರ
ಮವು ಮಹಿಳೆಯರು ನಿರ್ಭಯವಾಗಿ ಮತ್ತು ಆತ್ಮವಿಶ್ವಾಸದಿಂದ ಓಡಾಡಲು ಸಹಾಯ ಮಾಡಲಿದೆ’ ಎಂದು ರಿಜ್ವಾನ್ ಅರ್ಷದ್ ಹೇಳಿದರು.

ADVERTISEMENT

‘ಮಾದರಿ ಕ್ಷೇತ್ರದ ಬಗ್ಗೆ ನಾಗರಿಕರ ನಿರೀಕ್ಷೆಗಳು, ಮಹಿಳಾ ಸುರಕ್ಷತೆ ಹಾಗೂ ಸಬಲೀಕರಣ’ ಕುರಿತು ಸಂವಾದದಲ್ಲಿ ಮಾತನಾಡಿದ ಐಪಿಎಸ್ ಅಧಿಕಾರಿ ಇಶಾ ಪಂತ್, ‘ಬೆಂಗಳೂರು ಜಾಗತಿಕ ನಗರ. ಇಲ್ಲಿ ‘ನಿರ್ಭಯಾ’ ಯೋಜನೆಯಡಿ ನಗರದಾದ್ಯಂತ 7,500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ’ ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ‘ಲಾಕ್‍ಡೌನ್ ಅವಧಿಯಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ
ದೌರ್ಜನ್ಯ ಪ್ರಕರಣಗಳು ಅವ್ಯಾಹತವಾಗಿ ದಾಖಲಾಗಿವೆ. ಮಹಿಳೆಯರು ಆರ್ಥಿಕವಾಗಿ ಸದೃಢ ಹಾಗೂ ಜಾಗೃತರಾಗುವುದು ಅಗತ್ಯ’ ಎಂದರು.

ಸಿಟಿಜನ್ ಫಾರ್ ಬೆಂಗಳೂರು ಸಂಸ್ಥೆಯ ತಾರಾ ಕೃಷ್ಣಸ್ವಾಮಿ, ಬಿಪ್ಯಾಕ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ರೇವತಿ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.