ADVERTISEMENT

ಪೇಜಾವರಶ್ರೀಯಿಂದಲೇ ಉಡುಪಿಯಲ್ಲಿ ಕೋಮುಸಾಮರಸ್ಯ ಗಟ್ಟಿಗೊಂಡಿರುವುದು: ಬಿಷಪ್‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 7:01 IST
Last Updated 30 ಡಿಸೆಂಬರ್ 2019, 7:01 IST
ಜೆರಾಲ್ಡ್‌ ಐಸಾಕ್‌ ಲೋಬೊ
ಜೆರಾಲ್ಡ್‌ ಐಸಾಕ್‌ ಲೋಬೊ   

ಉಡುಪಿ: ಧರ್ಮಗುರುಗಳಾಗಿ, ಯತಿಗಳಾಗಿ ಸಮುದಾಯವನ್ನು ಮುನ್ನಡೆಸುವುದು ಬಹಳ ದೊಡ್ಡ ಜವಾಬ್ದಾರಿ. ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಗುರು, ಎಲ್ಲರಿಗಿಂತ ಮೊದಲಾಗಿ ಸರಿದಾರಿಯಲ್ಲಿ ನಡೆಯಬೇಕು. ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಯತಿಗಳು ಪೇಜಾವರಶ್ರೀ.

ಉಡುಪಿ ಹಿಂದೂಗಳ ಶ್ರದ್ಧಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಷ್ಟಮಠಗಳು, ಪ್ರಸಿದ್ಧ ದೇವಸ್ಥಾನ, ಚರ್ಚ್‌ಗಳನ್ನು ಹೊಂದಿರುವ ಪವಿತ್ರ ಭೂಮಿ. ಈ ನೆಲದಲ್ಲಿ ಶಾಂತಿ, ಸೌಹಾರ್ದತೆ, ಕೋಮು ಸಾಮರಸ್ಯ ಗಟ್ಟಿಯಾಗಿದೆ ಎಂದರೆ ಅದಕ್ಕೆ ಪೇಜಾವರಶ್ರೀಗಳು ಪ್ರಮುಖವಾಗಿ ಕಾರಣರು ಎಂದರೆ ತಪ್ಪಾಗಲಾರದು.

ಕ್ರೈಸ್ತರಿಗೆ ಕ್ರಿಸ್‌ಮಸ್‌ ಪವಿತ್ರ ಹಬ್ಬ. ಹಾಗೆಯೇ, ಕೃಷ್ಣನೂರಿನಲ್ಲಿ ನಡೆಯುವ ಪರ್ಯಾಯ ಮಹೋತ್ಸವ ಕೂಡ ಸರ್ವಧರ್ಮೀಯರಿಗೂ ಹಬ್ಬದಂತೆ. ಪರ್ಯಾಯಕ್ಕೆ ಹಿಂದೂಗಳು ಮಾತ್ರವಲ್ಲ, ಕ್ರೈಸ್ತರು ಹಿಂದಿನಿಂದ ಹೊರೆ ಕಾಣಿಕೆ ಸಲ್ಲಿಸುವ ರೂಢಿ ಇದೆ. ಧರ್ಮಗಳನ್ನು ಬೆಸೆಯುವ ಇಂತಹ ರೂಢಿ, ಸಂಪ್ರದಾಯಗಳು ಸೌಹಾರ್ದ ಸೇತುವೆಯನ್ನು ಮತ್ತಷ್ಟು ಬಲಪಡಿಸುತ್ತವೆ.

ADVERTISEMENT

ಯತಿಗಳು ಆಧ್ಯಾತ್ಮ ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದುವುದು ಕಡಿಮೆ. ಆದರೆ, ಪೇಜಾವರಶ್ರೀಗಳು ಯತಿಧರ್ಮ ಪಾಲನೆಯ ಜತೆಗೆ ಸಮಾಜದ ಆಗುಹೋಗುಗಳಿಗೂ ಸ್ಪಂದಿಸುವ, ಅನಿಸಿದ್ದನ್ನು ನೇರವಾಗಿ ಹೇಳಿಬಿಡುವ ವ್ಯಕ್ತಿತ್ವದವರು.

ಹಿಂದೂ ಧರ್ಮವನ್ನು ಅತಿಯಾಗಿ ಪ್ರೀತಿಸಿದರೂ ಪರಧರ್ಮವನ್ನು ಗೌರವದಿಂದ ಕಾಣುವ ವ್ಯಕ್ತಿತ್ವವನ್ನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಎಲ್ಲ ಧರ್ಮಗಳೂ ಹೇಳುವುದು ಇದನ್ನೇ. ಪರಧರ್ಮವನ್ನು ಗೌರವಿಸಿದರೆ, ಸೌಹಾರ್ದ ತಾನಾಗೇ ನೆಲೆಸುತ್ತದೆ. ಇದಕ್ಕೆ ಉಡುಪಿ ಉದಾಹರಣೆ.

ಧರ್ಮಗ್ರಂಥಗಳ ಸಾರ ಬೋಧನೆಗಷ್ಟೆ ಸೀಮಿತವಾಗಿರುವ ಕಾಲಘಟ್ಟದಲ್ಲಿ ಗ್ರಂಥಗಳ ಸಾರವನ್ನು ಅಕ್ಷರಶಃ ಜೀವಿಸಿದವರು ಪೇಜಾವರಶ್ರೀಗಳು. ಈ ಕಾರಣಕ್ಕೆ ಅವರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಡವರನ್ನೂ ಹತ್ತಿರ ಕರೆದು ಮಾತನಾಡುವ ಸರಳತೆಯನ್ನು ಅವರಲ್ಲಿ ಕಂಡಿದ್ದೇನೆ. ಬದುಕಿನುದ್ದಕ್ಕೂ ಸರಳ ಸಂತನಂತೆ ಬದುಕಿದ ಯತಿಗಳು ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.

–ಡಾ. ಜೆರಾಲ್ಡ್‌ ಐಸಾಕ್‌ ಲೋಬೊ, ಉಡುಪಿ ಬಿಷಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.