ADVERTISEMENT

ಹಾಸಿಗೆ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2021, 17:11 IST
Last Updated 25 ಮೇ 2021, 17:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆಗಳನ್ನು ಬ್ಲಾಕ್‌ ಮಾಡಿಸಿ ಮಾರುತ್ತಿದ್ದ ಪ್ರಕರಣ ಸಂಬಂಧ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಎನ್ನಲಾದ ಬಾಬುನನ್ನು (34) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರೂಪೇನ ಅಗ್ರಹಾರದ ಬಾಬು ಈ ಪ್ರಕರಣದ ಪ್ರಮುಖ ಆರೋಪಿ. ಬಿಜೆಪಿ ಕಾರ್ಯಕರ್ತನೂ ಹೌದು. ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು, ವಾರ್‌ರೂಮ್‌ ಸಿಬ್ಬಂದಿ ಹಾಗೂ ಈಗಾಗಲೇ ಬಂಧಿಸಿರುವ ಆರೋಪಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದ. ಈ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿ ಬಂಧಿಸಲಾಗಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಂಗಳವಾರ ತಿಳಿಸಿದರು.

‘ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶಾಸಕರ ಪರವಾಗಿ ಬಾಬು ಕೆಲಸ ಮಾಡುತ್ತಿದ್ದ. ಬಿಯು ಸಂಖ್ಯೆ ಪಡೆಯುವ ಸೋಂಕಿತರಿಗೆ ಸರ್ಕಾರದಿಂದ ಚಿಕಿತ್ಸೆ ಕೊಡಿಸಲೆಂದು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಲಾಗಿತ್ತು. ಅವುಗಳನ್ನು ಬ್ಲಾಕ್‌ ಮಾಡಿಸಿ ಸಹಚರರ ಮೂಲಕ ಅನ್ಯರಿಗೆ ಮಾರಾಟ ಮಾಡಿಸುತ್ತಿದ್ದ’ ಎಂದೂ ವಿವರಿಸಿದರು.

ADVERTISEMENT

‘ಈ ಕೃತ್ಯದಿಂದ ಬಾಬು ಲಕ್ಷಾಂತರ ರೂಪಾಯಿ ಗಳಿಸಿದ್ದಾನೆ. ಅದಕ್ಕೆ ಪೂರಕ ದಾಖಲೆ ಸಂಗ್ರಹಿಸಲಾಗಿದೆ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗಿದೆ’ ಎಂದೂ ಹೇಳಿದರು.

ವಾರ್‌ರೂಮ್‌ಗೆ ನಿತ್ಯದ ಅತಿಥಿ: ‘ಸತೀಶ್ ರೆಡ್ಡಿ ತಮ್ಮ ಕ್ಷೇತ್ರದ ಸೋಂಕಿತರಿಗೆ ಹಾಸಿಗೆ ಕೊಡಿಸಲು ಯತ್ನಿಸುತ್ತಿದ್ದರು. ಶಾಸಕರ ಆಪ್ತ ಎಂದು ಹೇಳಿಕೊಂಡು ವಾರ್‌ರೂಮ್‌ಗೆ ಹೋಗಿ ಬರುತ್ತಿದ್ದ ಬಾಬು ಅಲ್ಲಿನ ಸಿಬ್ಬಂದಿಯನ್ನು ಪರಿಚಯಿಸಿಕೊಂಡು ವ್ಯವಸ್ಥೆ ಬಗ್ಗೆ ತಿಳಿದುಕೊಂಡಿದ್ದ. ಈ ಬಗ್ಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿವೆ’ ಎಂದೂ ಅಧಿಕಾರಿ ವಿವರಿಸಿದರು.

‘ವಾರ್‌ ರೂಮ್‌ನಲ್ಲಿ ಬಾಬು ಇರುತ್ತಿದ್ದುದನ್ನು ಪ್ರೊಬೇಷನರಿ ಐಎಎಸ್ ಅಧಿಕಾರಿ ವಿ. ಯಶವಂತ್ ಪ್ರಶ್ನಿಸಿದ್ದರು. ಅದೇ ಕಾರಣಕ್ಕೆ ಏಪ್ರಿಲ್ 30ರಂದು ಬಾಬು ಹಾಗೂ ಆತನ ಸಹಚರರು ವಾರ್‌ ರೂಮ್‌ಗೆ ನುಗ್ಗಿ ಗಲಾಟೆ ಮಾಡಿದ್ದರು. ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದೂ ಹೇಳಿದರು.

ಮಧ್ಯವರ್ತಿಗಳನ್ನು ಸೃಷ್ಟಿಸಿದ್ದ: ‘ಜಯನಗರದ ಖಾಸಗಿ ಆಸ್ಪತ್ರೆಯೊಂದರ ಎರಡು ಹಾಸಿಗೆಗಳನ್ನು ತಲಾ ₹ 50 ಸಾವಿರಕ್ಕೆ ಮಾರಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಬೇಗೂರಿನ ನೇತ್ರಾವತಿ ಹಾಗೂ ಆಕೆಯ ಸ್ನೇಹಿತ ರೋಹಿತ್‌ಕುಮಾರ್‌ನನ್ನು ಬಂಧಿಸಿದ್ದರು. ಆರೋಪಿ ಆ ಇಬ್ಬರನ್ನೂ ಹಾಸಿಗೆ ಮಾರಾಟ ಮಾಡಲು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡಿದ್ದ ಸಂಗತಿ ತನಿಖೆಯಿಂದ ಬಹಿರಂಗವಾಗಿದೆ’ ಎಂದು ಅಧಿಕಾರಿ ತಿಳಿಸಿದರು.

ಬಾಬು

ಆಸ್ಪತ್ರೆಗಳಿಂದ ಮಾಹಿತಿ: ‘ಮೃತಪಟ್ಟವರು ಹಾಗೂ ಗುಣಮುಖರಾದ ಸೋಂಕಿತರ ಮಾಹಿತಿಯನ್ನು ಖಾಸಗಿ ಆಸ್ಪತ್ರೆಯ ಕೆಲ ನೌಕರರು ಬಾಬುಗೆ ತಿಳಿಸುತ್ತಿದ್ದರು. ಅವರ ಮಾಹಿತಿಯನ್ನು ವಾರ್‌ರೂಮ್‌ ಸಿಬ್ಬಂದಿಗೆ ತಲುಪಿಸುತ್ತಿದ್ದ ಬಾಬು, ಹಾಸಿಗೆಗಳನ್ನು ಬ್ಲಾಕ್‌ ಮಾಡಿಸುತ್ತಿದ್ದ. ಆಸ್ಪತ್ರೆ ನೌಕರರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದೂ ಅಧಿಕಾರಿ ವಿವರಿಸಿದರು.

‘ನೇತ್ರಾವತಿ, ರೋಹಿತ್‌ಕುಮಾರ್ ಸೇರಿ ಹಲವು ಮಧ್ಯವರ್ತಿಗಳನ್ನು ಸಂಪರ್ಕಿಸುತ್ತಿದ್ದ ಬಾಬು, ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಇವೆ. ಸೋಂಕಿತರನ್ನು ಕರೆತನ್ನಿ ಎನ್ನುತ್ತಿದ್ದ. ಸೋಂಕಿತರಿಗಾಗಿ ಮಾಡಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸುತ್ತಿದ್ದ ಮಧ್ಯವರ್ತಿಗಳು, ಖಾಸಗಿ ಆಸ್ಪತ್ರೆಗಳಿಗೆ ನೇರ ಹೋದರೆ ₹ 2 ಲಕ್ಷದಿಂದ ₹ 3 ಲಕ್ಷ ಆಗಬಹುದು. ಬದಲಿಗೆ ₹ 50 ಸಾವಿರ ಕೊಟ್ಟರೆ ನೀವು ಕೇಳಿದ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸುತ್ತೇವೆ ಎನ್ನುತ್ತಿದ್ದರು’ ಎಂದೂ ಅಧಿಕಾರಿ ಹೇಳಿದರು.

ವಿಚಾರಣೆ ಎದುರಿಸಿದ್ದ ದಿನವೇ ‘ಕೋವಿಡ್’
ಪ್ರಕರಣ ಸಂಬಂಧ ಬಂಧಿತಳಾಗಿದ್ದ ನೇತ್ರಾವತಿ, ‘ಸೋಂಕಿತ ನೀಡಿದ್ದ ಹಣವನ್ನು ಬಾಬುಗೆ ಕೊಟ್ಟಿದ್ದೆ’ ಎಂದಿದ್ದಳು. ಬಳಿಕ ಸಿಸಿಬಿ ಪೊಲೀಸರು ಮೇ 7ರಂದು ಬಾಬುನನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ವಿಚಾರಣೆ ನಂತರ ಮನೆಗೆ ಹೋಗಿದ್ದ ಬಾಬು, ‘ನನಗೆ ಸೋಂಕು ತಗುಲಿದೆ’ ಎಂದು ಆಸ್ಪತ್ರೆಗೆ ಸೇರಿದ್ದ. ಬಾಬು ಗುಣಮುಖವಾಗಿದ್ದು, ಇದು ಗೊತ್ತಾಗುತ್ತಿದ್ದಂತೆ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರಸಂಖ್ಯೆ 11 ಕ್ಕೆ ಏರಿದೆ.

ಸತೀಶ್ ರೆಡ್ಡಿ ವಿಚಾರಣೆ ಸಾಧ್ಯತೆ
ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಂ.ಸತೀಶ್ ರೆಡ್ಡಿ, ಎಲ್‌.ಎ.ರವಿಸುಬ್ರಹ್ಮಣ್ಯ ಹಾಗೂ ಉದಯ್ ಗರುಡಾಚಾರ್ ಅವರು ದಕ್ಷಿಣ ವಲಯದ ವಾರ್‌ರೂಮ್‌ಗೆ ಭೇಟಿ ನೀಡಿ ಹಾಸಿಗೆ ಬ್ಲಾಕಿಂಗ್ ದಂಧೆ ಬಗ್ಗೆ ಮಾತನಾಡಿದ್ದಲ್ಲದೇ, ‘ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದರು.

ಇದೀಗ ಸತೀಶ್ ರೆಡ್ಡಿ ಅವರ ಆಪ್ತನನ್ನೇ ಬಂಧಿಸಲಾಗಿದೆ. ಜೊತೆಗೆ ಆರೋಪಿ ಬಾಬು, ಸತೀಶ್ ರೆಡ್ಡಿ ಹೆಸರು ಹೇಳಿಯೇ ಹಲವರನ್ನು ಸಂಪರ್ಕಿಸಿದ್ದ ಮಾಹಿತಿ ಸಿಸಿಬಿಗೆ ಸಿಕ್ಕಿದೆ. ಬಾಬು ಜೊತೆಗಿನ ಸಂಬಂಧದ ಬಗ್ಗೆ ಹೇಳಿಕೆ ಪಡೆಯಲು ಸತೀಶ್ ರೆಡ್ಡಿ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.