ADVERTISEMENT

‘ಅಧಿವೇಶನ ನಮ್ಮ ಬಾಳೇನ ಸತ್ಯಾನಾಶ ಮಾಡೇತಿ’

‍ಪ್ರತಿಭಟನೆ ಉದ್ದೇಶಕ್ಕೆ ಬಾಡಿಗೆಗೆ ಭೂಮಿ ನೀಡಲು ರೈತರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 20:29 IST
Last Updated 2 ಡಿಸೆಂಬರ್ 2022, 20:29 IST
ಪ್ರತಿವರ್ಷ ಪ್ರತಿಭಟನಾ ಸ್ಥಳಕ್ಕೆ ಬಳಸುತ್ತಿದ್ದ ಬೆಳಗಾವಿ ತಾಲ್ಲೂಕಿನ ಕೊಂಡಸಕೊಪ್ಪದ ಭೂಮಿ
ಪ್ರತಿವರ್ಷ ಪ್ರತಿಭಟನಾ ಸ್ಥಳಕ್ಕೆ ಬಳಸುತ್ತಿದ್ದ ಬೆಳಗಾವಿ ತಾಲ್ಲೂಕಿನ ಕೊಂಡಸಕೊಪ್ಪದ ಭೂಮಿ   

ಬೆಳಗಾವಿ: ‘ಅಧಿವೇಶನ ಬಂತಂದ್ರ ನಮಗ್‌ ನಡಕ್‌ ಶುರುವಾಗ್ತೇತಿ. ಪ್ರತಿ ಭಟನೆ ನಡೆಸೋಕೆ ಬರಾವ್ರಿಗೆ ವ್ಯವಸ್ಥಾ ಕಲ್ಪಿಸಾಕ್‌ ಹೊಲ ಬಾಡಿಗೆ ಮ್ಯಾಲ ಪಡಿತಾರು. ಆದ್ರ ಟೈಮಕ್‌ ಸರಿಯಾಗಿ ಹಣ ಕೊಡುದಿಲ್ಲ. ವರ್ಷಪೂರ್ತಿ ಓಡಾಡಿಸ್ತಾರು. ಈ ಅಧಿವೇಶನ ನಮ್ಮ ಬಾಳೇನ ಸತ್ಯಾನಾಶ ಮಾಡೇತಿ. ಹಂಗಾಗಿ, ಈ ಸಲ ಭೂಮಿನ ಕೊಡೂದ ಬ್ಯಾಡಂತ ಎಲ್ಲಾ ರೈತರೂ ತೀರ್ಮಾನ ಮಾಡೇವಿ’

–ತಾಲ್ಲೂಕಿನ ಹಲಗಾದಲ್ಲಿ ಕೃಷಿ ಕಾಯಕದಲ್ಲಿ ನಿರತ ವಾಗಿದ್ದ ರೈತ ಮಹಾವೀರ ಪಾಟೀಲ ‘ಪ್ರಜಾವಾಣಿ’ ಎದುರು ಅಳಲು ತೋಡಿ ಕೊಂಡಿದ್ದು ಹೀಗೆ.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಪ್ರತಿವರ್ಷ ಪ್ರತಿಭಟನೆ ನಡೆಸಲು ಬರುವ ವರಿಗೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಹಲಗಾದಲ್ಲಿ ಸುಮಾರು 5 ಎಕರೆ ಮತ್ತು ಕೊಂಡಸಕೊಪ್ಪದಲ್ಲಿ 3 ಎಕರೆ ಭೂಮಿಯನ್ನು ಬಾಡಿಗೆ ಆಧಾರದಲ್ಲಿ ಪಡೆಯುತ್ತದೆ.

ADVERTISEMENT

ಕೆಲವರುಈಗ ವಿವಿಧ ಬೆಳೆ ಬೆಳೆದಿದ್ದಾರೆ. ಇನ್ನೂ ಕೆಲವರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಆ ಭೂಮಿಯನ್ನು ಬಾಡಿಗೆಗೆ ನೀಡಲು ರೈತರು ಸಿದ್ಧರಿಲ್ಲ. ‘ಪ್ರತಿಭಟನಾ ಸ್ಥಳಕ್ಕಾಗಿ ಪರ್ಯಾಯ ಭೂಮಿ ಅಥವಾ ಕೃಷಿಯೇತರ ವಾಣಿಜ್ಯ ಭೂಮಿ ಹುಡುಕಬೇಕು’ ಎಂಬುದು ಅವರ ಒತ್ತಾಯ.

‘ಒಂದ ಎಕರೆದಾಗ್‌ ಜ್ವಾಳ್‌ ಬೆಳೆದೇನ್ರಿ. ಕಟಾವಿಗೆ ಇನ್ನೊಂದು ತಿಂಗಳಾದರೂ ಬೇಕು. ಹಂಗಾಗಿ ಈ ಸಲಾ ಭೂಮಿ ಕೊಡಾಕ್‌ ಆಗಲ್ಲ. ಆದ್ರೂ ಪೊಲೀಸರ ಮೂಲಕ ನಮ್ಮ ಮ್ಯಾಲ ಒತ್ತಡ ತಂದು ಅಧಿಕಾರಿಗಳು ಭೂಮಿ ಪಡಿತಾರು. ಪ್ರತಿಭಟನೆಗೆ ಬಂದಾವ್ರ ಕಸ–ಕಡ್ಡಿ, ಬಾಟಲಿ, ಊಟದ ಎಲೆಗೋಳ್ನ ಇಲ್ಲೇ ಒಗೆದು ಹೋಗ್ತಾರು. ಸಿಬ್ಬಂದಿನೂ ಸ್ವಚ್ಛಗೊಳಿಸಲ್ಲ. ನಾವ ಅದನ್ನು ಸ್ವಚ್ಛ ಮಾಡುವ್ಹಂಗ ಆಗೇತಿ. ನಮ್ಮ ಗೋಳು ಯಾರ ಕೇಳಾವ್ರಿ’ ಎಂದು ಮಹಾವೀರ ಅವಲತ್ತುಕೊಂಡರು.

ಇದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ರೈತ ಬಾಳಪ್ಪ ಚಿಕ್ಕಪರಪ್ಪ, ‘ಪ್ರತಿಭಟನಕಾರರಿಗೆ ಕುಳಿತುಕೊಳ್ಳಲು
ಅನುಕೂಲವಾಗಲೆಂದು ಜೆಸಿಬಿ ಯಂತ್ರ ಬಳಸಿ ಭೂಮಿ ಗಟ್ಟಿಗೊಳಿಸುತ್ತಾರೆ. ಅಧಿವೇಶನ ಮುಗಿದ ಮೇಲೆ ನಾವೂ ಟ್ರ್ಯಾಕ್ಟರ್‌ನಿಂದ ನೇಗಿಲು ಹೊಡೆದು, ಮತ್ತೆ ಭೂಮಿ ಹದಗೊಳಿಸಬೇಕು. ಕಳೆದ 10 ವರ್ಷಗಳಿಂದ, ಪ್ರತಿಭಟನೆಗೆ ಭೂಮಿ ಕೊಡಲು ಆರಂಭಿಸಿದ ನಂತರ ಇಳುವರಿಯೂ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿಬಾರಿ ಜಿಲ್ಲಾಡಳಿತ ಪಡೆಯುವ ಒಂದು ಗುಂಟೆ ಜಮೀನಿಗೆ ₹ 2 ಸಾವಿರ ಬಾಡಿಗೆ ನೀಡುವಂತೆ ಬೇಡಿಕೆ ಇರಿಸುತ್ತಿದ್ದೇವೆ. ಆದರೆ, ₹1,380 ನೀಡು ತ್ತಿದೆ.ಪ್ರತಿಭಟನಾ ಸ್ಥಳಕ್ಕಾಗಿ ಭೂಮಿ ನೀಡದೆ ಬೆಳೆ ಬೆಳೆದರೆ, ಇದಕ್ಕಿಂತಲೂ ಹೆಚ್ಚಿನ ಆದಾಯ ಕೈಸೇರುತ್ತದೆ’ ಎಂದು ರೈತರಾದ ಬಸವಂತಪ್ಪ ಚಿಕ್ಕಪರಪ್ಪ, ಜ್ಯೋತಿಬಾ ಸಂತಾಜಿ ಹೇಳಿದರು.

‘ಸರ್ಕಾರ ನಮಗೇನೂ ಬಾಡಿಗೆ ಕೊಡಲ್ಲ’

‘ಪ್ರತಿಭಟನೆ ನಡೆಸುವವರಿಗೆ, ಪೆಂಡಾಲ್‌ ಹಾಕಿದ ಹೊಲಗಳಿಗೆ ಸರ್ಕಾರ ಬಾಡಿಗೆ ಕೊಡುತ್ತದೆ. ಆ ಹೊಲದ ಪಕ್ಕದಲ್ಲೇ ನಮ್ಮ ಜಮೀನುಗಳಿವೆ. ಪ್ರತಿಭಟನಾಕಾರರೆಲ್ಲ ನಮ್ಮ ಹೊಲದಲ್ಲಿ ಓಡಾಡಿ ಬೆಳೆ ಹಾನಿ ಮಾಡುತ್ತಾರೆ. ಮೂತ್ರ ವಿಸರ್ಜನೆ, ಶೌಚಕ್ಕೂ ಬಳಸುತ್ತಾರೆ. ಆದರೆ, ಸರ್ಕಾರ ನಮಗೆ ಬಾಡಿಗೆನೂ ಕೊಡುವುದಿಲ್ಲ. ಪರಿಹಾರವೂ ಇಲ್ಲ’ ಎಂದು ಗುಂಡಪ್ಪ ದೇಸಾಯಿ ಅಳಲು ತೋಡಿಕೊಂಡರು.

****

ಪ್ರತಿಭಟನೆ ಉದ್ದೇಶಕ್ಕೆ ಗುರುತಿ ಸಲು ಕೃಷಿಯೇತರ ವಾಣಿಜ್ಯ ಭೂಮಿ ಹುಡುಕುತ್ತಿದ್ದೇವೆ. ಎರಡು ಕಡೆ ಗುರುತಿಸಿದ್ದು, ಪೊಲೀಸರು ಅಂತಿಮಗೊಳಿಸಲಿದ್ದಾರೆ. ರೈತರ ಕೃಷಿಭೂಮಿಯನ್ನೇ ಪಡೆದರೂ ನಿಯ ಮಾನುಸಾರ ಬಾಡಿಗೆ ಪಾವತಿಸುತ್ತೇವೆ

-ನಿತೇಶ್‌ ಪಾಟೀಲ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.