ಬೆಂಗಳೂರು: ‘ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಚರಿತ್ರೆ ಸೃಷ್ಟಿಸಲಿದೆ’ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.
‘ಕನ್ನಡಿಗರ ಹೆಮ್ಮೆಯ ಉತ್ಸವವನ್ನು ಚಾರಿತ್ರಿಕವಾಗಿ ನಡೆಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಸರ್ಕಾರದ ಕಡೆಯಿಂದ ಅಗತ್ಯ ನೆರವು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾದ ಅವರಿಗೆ ಇದೇ ವೇಳೆ ಸಾಂಕೇತಿಕವಾಗಿ ವಿಶೇಷ ಗುರುತಿನ ಚೀಟಿ ವಿತರಿಸಲಾಯಿತು.
ಇದಕ್ಕೂ ಮೊದಲು ಕಸಾಪ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸ ವಿವರಿಸಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಈವರೆಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಐದು ಸಮ್ಮೇಳನಗಳು ನಡೆದಿವೆ. 68 ವರ್ಷಗಳ ನಂತರ ಬಳ್ಳಾರಿಯಲ್ಲಿ ಮತ್ತೆ ಸಮ್ಮೇಳನ ನಡೆಯುತ್ತಿದೆ. ಕಾರ್ಯಕಾರಿ ಸಮಿತಿಯು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ’ ಎಂದರು.
ಇದನ್ನು ಶ್ಲಾಘಿಸಿದ ಸಚಿವರು, ‘ಬಾನು ಮುಷ್ತಾಕ್ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಐದನೆಯ ಮಹಿಳೆ, ಮೊದಲ ಅಲ್ಪಸಂಖ್ಯಾತ ಮಹಿಳೆ ಎನ್ನುವುದು ಸಂತೋಷದ ಸಂಗತಿ. ಬಳ್ಳಾರಿಯಲ್ಲಿ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿರುವುದು ನಮ್ಮ ಅದೃಷ್ಟ’ ಎಂದು ಬಣ್ಣಿಸಿದರು.
ಬಳ್ಳಾರಿಯ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ, ‘ಜಿಲ್ಲಾಡಳಿತವು ಸಂಪೂರ್ಣ ಸಹಕಾರ ನೀಡುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಲಿದೆ’ ಎಂದು ತಿಳಿಸಿದರು.
ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ಎಸ್‌ಪಿ ಶೋಭಾರಾಣಿ ವಿ.ಜೆ., ಕಸಾಪ ಗೌರವ ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು, ಮಾಧ್ಯಮ ಸಂಚಾಲಕ ಎನ್.ಎಸ್. ಶ್ರೀಧರಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.