ADVERTISEMENT

ಬೆಮೆಲ್ ಕನ್ನಡ ಸಂಘವನ್ನು ಕೂಡಲೇ ಆರಂಭಿಸಿ: ಪುರುಷೋತ್ತಮ ಬಿಳಿಮಲೆ ತಾಕೀತು

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:17 IST
Last Updated 27 ಜನವರಿ 2026, 16:17 IST
ಬೆಮೆಲ್ ಅಧಿಕಾರಿಗಳ ಜತೆಗೆ ಪುರುಷೋತ್ತಮ ಬಿಳಿಮಲೆ ಸಭೆ ನಡೆಸಿದರು
ಬೆಮೆಲ್ ಅಧಿಕಾರಿಗಳ ಜತೆಗೆ ಪುರುಷೋತ್ತಮ ಬಿಳಿಮಲೆ ಸಭೆ ನಡೆಸಿದರು   

ಬೆಂಗಳೂರು: ‘ಕೇಂದ್ರಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನ (ಬೆಮೆಲ್) ಬೆಂಗಳೂರು ಸಂಕೀರ್ಣದಲ್ಲಿ ನಿಷ್ಕ್ರಿಯಗೊಂಡಿರುವ ಕನ್ನಡ ಸಂಘವನ್ನು ಕೂಡಲೇ ಆರಂಭಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಬೆಮೆಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಬೆಮೆಲ್‌ನ ಕೇಂದ್ರ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯನ್ನು ಮಂಗಳವಾರ ನಡೆಸಿದ ಅವರು, ‘ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಪ್ರಥಮ ಪ್ರಾತಿನಿಧ್ಯ ಕಲ್ಪಿಸಲು ಕನ್ನಡ ಸಂಘ ಮುಂದುವರಿಕೆಗೆ ಆಡಳಿತ ಮಂಡಳಿ ಅವಕಾಶ ಕಲ್ಪಿಸಬೇಕು. ಕೇಂದ್ರಸ್ವಾಮ್ಯದ ಉದ್ದಿಮೆಗಳಲ್ಲಿ ಕನ್ನಡ ಕಾರ್ಮಿಕರ ಸಂಖ್ಯೆ ನಾನಾ ಕಾರಣಗಳಿಂದ ಕ್ಷೀಣಿಸುತ್ತಿದ್ದು, ಭಾಷಾ ಹಕ್ಕುಗಳ ಸಮರ್ಪಕ ಪ್ರತಿಪಾದನೆಗೆ ಕನ್ನಡ ಸಂಘಗಳ ಅಗತ್ಯ ಹೆಚ್ಚಿದೆ. ಕಳೆದ ಒಂದು ವರ್ಷದಿಂದ ಬೆಮೆಲ್‌ನ ಬೆಂಗಳೂರು ಸಂಕೀರ್ಣದಲ್ಲಿ ಕನ್ನಡ ಸಂಘ ಕಾರ್ಯನಿರ್ವಹಿಸದಿರುವುದು ಕನ್ನಡದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

‘ಜಾಗತೀಕರಣದ ಪರಿಣಾಮ ಮಾರುಕಟ್ಟೆ ಭಾಷೆ ಪ್ರಭಾವಶಾಲಿಯಾಗಿ, ಸ್ಥಳೀಯ ಭಾಷೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಗೌರವಿಸುವ ವಾತಾವರಣ ಸೃಷ್ಟಿಸುವ ಮಹತ್ತರ ಜವಾಬ್ದಾರಿ ಹೊಂದಿವೆ’ ಎಂದು ಹೇಳಿದರು.  

ADVERTISEMENT

ಸ್ಥಳೀಯರಿಗೆ ಆದ್ಯತೆ ನೀಡಿ: ‘ಬಹಳ ದಿನಗಳ ನಂತರ ಬೆಮೆಲ್ ಸಂಸ್ಥೆಯು ‘ಸಿ’ ವೃಂದದ ನೌಕರರ ನೇಮಕಾತಿಗೆ ಚಾಲನೆ ನೀಡುತ್ತಿದೆ. ಈ ನೇಮಕಾತಿ ಅಧಿಸೂಚನೆಯನ್ನು ಕನ್ನಡದಲ್ಲಿಯೂ ಪ್ರಕಟಿಸುವುದಲ್ಲದೆ, ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು’ ಎಂದು ಬಿಳಿಮಲೆ ಆಗ್ರಹಿಸಿದರು. 

‘ಬೆಮೆಲ್ ಸಂಸ್ಥೆ ತನ್ನ ಲಾಂಛನದಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ ಅವಕಾಶ ನೀಡಿದೆ. ಕೂಡಲೇ ಈ ಲಾಂಛನದಲ್ಲಿ ಕನ್ನಡವನ್ನೂ ಅಳವಡಿಸಿಕೊಳ್ಳಬೇಕು. ಸಂಸ್ಥೆಯ ಜಾಲತಾಣದಲ್ಲಿಯೂ ಕನ್ನಡ ಭಾಷೆಯ ಆಯ್ಕೆಯನ್ನು ಸೇರ್ಪಡೆ ಮಾಡಬೇಕು’ ಎಂದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಬೆಮೆಲ್‌ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ದೇವಿಪ್ರಸಾದ ಸತ್ಪತಿ, ಕಾರ್ಯನಿರ್ವಾಹಕ ನಿರ್ದೇಶಕ  ಎಂ.ಜಿ.ಜಿ.ರಾಜು, ಎಜಿಎಂ ಮಹಾಲಕ್ಷ್ಮಮ್ಮ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ.ಶ್ಯಾಮಸುಂದರ ರಾವ್, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಸು.ಜಗದೀಶ್, ಬಾ.ಹಾ.ಶೇಖರಪ್ಪ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.