ADVERTISEMENT

ಬೆಂಗಳೂರು: ನಮ್ಮ ಮೆಟ್ರೊ ಹಳಿ ಮೇಲೆ ಓಡಾಡಿದ ಯುವಕ! 27 ನಿಮಿಷ ಮೆಟ್ರೊ ಸ್ಥಗಿತ

ಹಳಿ ಮೇಲೆ ಓಡಾಡಿದ್ದ ಯುವಕನನ್ನು ಮೆಟ್ರೊ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಹೆಸರು ಹಾಗೂ ಹಿನ್ನೆಲೆ ಸದ್ಯಕ್ಕೆ ಗೊತ್ತಾಗಿಲ್ಲ.

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 16:23 IST
Last Updated 12 ಮಾರ್ಚ್ 2024, 16:23 IST
<div class="paragraphs"><p>‘ನಮ್ಮ ಮೆಟ್ರೊ’ದ ಹಸಿರು ಮಾರ್ಗ</p></div>

‘ನಮ್ಮ ಮೆಟ್ರೊ’ದ ಹಸಿರು ಮಾರ್ಗ

   

ಬೆಂಗಳೂರು: ಜ್ಞಾನಭಾರತಿ ನಿಲ್ದಾಣದಿಂದ ಪಟ್ಟಣಗೆರೆ ನಿಲ್ದಾಣ ನಡುವಿನ ಹಳಿ ಮೇಲೆ ಯುವಕನೊಬ್ಬ ಓಡಾಡಿದ್ದರಿಂದ, ಈ ಮಾರ್ಗದಲ್ಲಿ 27 ನಿಮಿಷ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಮಂಗಳವಾರ ನಡೆದಿರುವ ಈ ಘಟನೆಯಿಂದ ಪ್ರಯಾಣಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು. ಹಳಿ ಮೇಲೆ ಓಡಾಡಿದ್ದ ಯುವಕನನ್ನು ಮೆಟ್ರೊ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಹೆಸರು ಹಾಗೂ ಹಿನ್ನೆಲೆ ಸದ್ಯಕ್ಕೆ ಗೊತ್ತಾಗಿಲ್ಲ.

ADVERTISEMENT

‘ಮಧ್ಯಾಹ್ನ 3 ಗಂಟೆ ಸುಮಾರಿಗೆ ಯುವಕನೊಬ್ಬ, ವಿದ್ಯುತ್ ಹರಿಯುತ್ತಿದ್ದ ಹಳಿ ಪಕ್ಕವೇ ನಡೆದುಕೊಂಡು ಹೊರಟಿದ್ದ. ಅದನ್ನು ನೋಡಿದ್ದ ಸಿಬ್ಬಂದಿ, ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದಾಗಿ ಮೈಸೂರು ರಸ್ತೆಯಿಂದ ಚಲಘಟ್ಟ ನಿಲ್ದಾಣವರೆಗಿನ ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು’ ಎಂದು ಮೆಟ್ರೊ ಮೂಲಗಳು ಹೇಳಿವೆ.

‘ಹಳಿಗೆ ಇಳಿದಿದ್ದ ಸಿಬ್ಬಂದಿ, ಯುವಕನನ್ನು ಬೆನ್ನಟ್ಟಿ ಹಿಡಿದಿದ್ದರು. ಮಧ್ಯಾಹ್ನ 3.27 ಗಂಟೆ ನಂತರ ವಿದ್ಯುತ್ ಸಂಪರ್ಕ ಪುನಃ ನೀಡಲಾಯಿತು. ನಂತರವೇ, ರೈಲುಗಳ ಸಂಚಾರ ಆರಂಭವಾಯಿತು. ಯುವಕನ ಕೃತ್ಯದಿಂದ ನಷ್ಟವಾಗಿದೆ. ಯುವಕನ ಉದ್ದೇಶವೇನು? ಇದು ಆಕಸ್ಮಿಕವೋ ಅಥವಾ ಬೇರೆ ಏನಾದರೂ ಕಾರಣವಿದೆಯಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.