ADVERTISEMENT

ಆ್ಯಸಿಡ್‌ ದಾಳಿ: ಕಠಿಣ ಶಿಕ್ಷೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 20:00 IST
Last Updated 19 ಮೇ 2022, 20:00 IST

ಬೆಂಗಳೂರು: ಮಹಿಳೆಯರ ಮೇಲೆ ಆ್ಯಸಿಡ್‌ ದಾಳಿ ಮಾಡುವವರಿಗೆ ಇನ್ನಷ್ಟು ಕಠಿಣ ಶಿಕ್ಷೆ ನೀಡಲು ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಗೀತಾ ವಿವೇಕಾನಂದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಆ್ಯಸಿಡ್‌ ದಾಳಿ ಮಾಡಿದವರ ವಿರುದ್ಧ ಜಾಮೀನುರಹಿತ ವಾರೆಂಟ್‌ ಹೊರಡಿಸಿ ಕೂಡಲೇ ಬಂಧಿಸಬೇಕು. ಅಪರಾಧಿಗೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ ವಿಧಿಸಬೇಕು. ಆ್ಯಸಿಡ್‌ ದಾಳಿ ಸಂಬಂಧ ವಿಚಾರಣೆಗೆ ತ್ವರಿತ ನ್ಯಾಯ ನೀಡುವ ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಆ್ಯಸಿಡ್‌ ಸಂತ್ರಸ್ತರಿಗೆ ನೆರವಾಗಲು ಆಸರೆ ನೀಡುವ ಉದ್ದೇಶದಿಂದ ಮಾಸಾಶನವನ್ನು ₹3 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪ್ರತಿಯೊಬ್ಬ ಆ್ಯಸಿಡ್‌ ಸಂತ್ರಸ್ತ ಮಹಿಳೆಗೆ ಸರ್ಕಾರವು ಉಚಿತ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡಲು ಮುಂದಾಗಿರುವುದು ಮಹತ್ವದ ನಿರ್ಧಾರ ಎಂದು ಹೇಳಿದ್ದಾರೆ.

ADVERTISEMENT

ಆ್ಯಸಿಡ್‌ ಸಂತ್ರಸ್ತರಿಗೆ ಧೈರ್ಯ ತುಂಬುವ ದೃಷ್ಟಿಕೋನದಿಂದ ಮತ್ತು ಸ್ವಯಂ ಉದ್ಯೋಗಕ್ಕಾಗಿ ₹5 ಲಕ್ಷ ರೂಪಾಯಿ ಆರ್ಥಿಕ ನೆರವು ಕೊಡುವುದಾಗಿಯೂ ಸರ್ಕಾರ ಪ್ರಕಟಿಸಿದೆ. ಇದರಿಂದ ಸಂತ್ರಸ್ತರ ಆರ್ಥಿಕ ಚೇತರಿಕೆ ಸಾಧ್ಯವಿದೆ ಮತ್ತು ಅವರ ಆತ್ಮಸ್ಥೈರ್ಯವೂ ಹೆಚ್ಚಾಗಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.