ADVERTISEMENT

ಒಲ್ಲದ ಮನಸ್ಸಿನಿಂದ ಎಪಿಎಂಸಿ ಸ್ಥಳಾಂತರಕ್ಕೆ ವರ್ತಕರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:00 IST
Last Updated 29 ಮಾರ್ಚ್ 2020, 20:00 IST
ದಾಸನಪುರ ಉಪಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಲು ತಯಾರಿ ನಡೆಸಿದ ಎಪಿಎಂಸಿ ಅಧಿಕಾರಿಗಳು –ಪ್ರಜಾವಾಣಿ ಚಿತ್ರ
ದಾಸನಪುರ ಉಪಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಲು ತಯಾರಿ ನಡೆಸಿದ ಎಪಿಎಂಸಿ ಅಧಿಕಾರಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ತರಕಾರಿ ಮಾರುಕಟ್ಟೆಯನ್ನು ಯಶವಂತಪುರ ಎಪಿಎಂಸಿಯಿಂದ ದಾಸನಪುರಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ವರ್ತಕರು ಒಲ್ಲದ ಮನಸ್ಸಿನಲ್ಲಿ ಒಪ್ಪಿಕೊಂಡಿದ್ದಾರೆ. ದಾಸನಪುರ ಉಪ ಮಾರುಕಟ್ಟೆಯಲ್ಲಿ ಸೋಮವಾರದಿಂದ ವಹಿವಾಟು ಆರಂಭವಾಗಲಿದೆ.

ಎಪಿಎಂಸಿಯನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ದಾಸನಪುರ ಬಳಿ ಪ್ರಾಂಗಣ ನಿರ್ಮಿಸಲಾಗಿದೆ. ನೀರು ಮತ್ತು ರಸ್ತೆ ಸೌಕರ್ಯ ಸಮರ್ಪಕವಾಗಿ ಇಲ್ಲದ ಕಾರಣ ಈ ಮಾರುಕಟ್ಟೆಗೆ ವರ್ತಕರು ಸ್ಥಳಾಂತರ ಆಗಿರಲಿಲ್ಲ.

ಕೊರೊನಾ ಸೋಂಕು ತಡೆಯುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರುಕಟ್ಟೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

‘500ಕ್ಕೂ ಹೆಚ್ಚು ಈರುಳ್ಳಿ ಮತ್ತು ಆಲೂಗಡ್ಡೆ ಮಳಿಗೆ, 200ಕ್ಕೂ ಹೆಚ್ಚು ತರಕಾರಿ ಮಳಿಗೆಗಳಿವೆ. ಸದ್ಯ ನಗರದ ಒಳಗೆ ಸಂಚಾರಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ. ದಾಸನಪುರಕ್ಕೆ ವರ್ತಕರು, ಕೂಲಿ ಕಾರ್ಮಿಕರು, ಖರೀದಿ ಮಾಡುವವರು ಹೋಗುವುದು ಹೇಗೆ’ ಎಂಬುದು ವರ್ತಕರ ಪ್ರಶ್ನೆ.

‘ಲಾರಿಗಳಿಂದ ಈರುಳ್ಳಿ, ಆಲೂಗಡ್ಡೆ ಚೀಲ ಇಳಿಸಲು ಕಾರ್ಮಿಕರು ಬೆಳಿಗ್ಗೆ 4 ಗಂಟೆಗೆ ಹೋಗಬೇಕು. ಬಸ್‌ ಅಥವಾ ಬೇರಾವ ವ್ಯವಸ್ಥೆಯೂ ಇಲ್ಲ. ಈ ಸಮಸ್ಯೆ ಅರ್ಥ ಮಾಡಿಕೊಳ್ಳದೆ ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ’ ಎಂದು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಆಹಾರ ಸಚಿವ ಕೆ.ಗೋಪಾಲಯ್ಯ ಅವರ ಬಳಿ ಸಮಸ್ಯೆ ಹೇಳಿಕೊಂಡೆವು. ಕೊರೊನಾ ಸೋಂಕಿರುವ ಕಾರಣ ಒಂದು ತಿಂಗಳು ಸಹಕರಿಸಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಒಪ್ಪಿಕೊಂಡಿದ್ದೇವೆ. ಎಷ್ಟು ಜನ ವರ್ತಕರು ಅಂಗಡಿ ತೆರೆಯುತ್ತಾರೋ ಸೋಮವಾರ ಗೊತ್ತಾಗಲಿದೆ’ ಎಂದು ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಉದಯಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.