ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಆಟೊ ಚಾಲಕನಿಗೆ ಬಿಯರ್ ಬಾಟಲಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗಸಂದ್ರದ ತಿಪ್ಪೇನಹಳ್ಳಿ ನಿವಾಸಿ ಶಶಿಕುಮಾರ್(32) ಹಲ್ಲೆಗೆ ಒಳಗಾದವರು.
ಕೃತ್ಯ ಎಸಗಿದ ಶಿವು ಅಲಿಯಾಸ್ ಜನರೇಟರ್(26) ಎಂಬಾತನ ಬಂಧಿಸಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಭರತ್ ಅಲಿಯಾಸ್ ಲ್ಯಾಪ್ಸ್ ಸೇರಿ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಶಶಿಕುಮಾರ್ ಅವರು ಆಟೊ ಚಾಲಕರಾಗಿದ್ದಾರೆ. ಅವರ ಪತ್ನಿ ದಿಪೀಕಾ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಜತೆಗೆ ದಂಪತಿ ತಿಪ್ಪೇನಹಳ್ಳಿಯಲ್ಲಿ ವಾಸವಾಗಿದ್ದಾರೆ.
ಸೆ.21ರಂದು ರಾತ್ರಿ ಸಂಬಂಧಿ ನೆಲಗೆದರನಹಳ್ಳಿಯಲ್ಲಿರುವ ಮೂರ್ತಿ ಅವರ ಮನೆಗೆ ಪಿತೃಪಕ್ಷದ ಊಟಕ್ಕೆಂದು ಬೈಕ್‌ನಲ್ಲಿ ಶಶಿಕುಮಾರ್ ತೆರಳುತ್ತಿದ್ದರು. ಮಾರ್ಗ ಮಧ್ಯೆ ಶಿವಪುರದ ವೈನ್ಸ್ ಸ್ಟೋರ್‌ನಲ್ಲಿ ಮದ್ಯ ಸೇವಿಸಲು ಹೋಗಿದ್ದರು. ಅದೇ ವೈನ್ಸ್ ಸ್ಟೋರ್‌ನಲ್ಲಿ ಆರೋಪಿಗಳಾದ ಭರತ್, ಶಿವು ಹಾಗೂ ಮತ್ತೊಬ್ಬ ಆರೋಪಿ ಮದ್ಯ ಸೇವಿಸುತ್ತಿದ್ದರು. ಶಶಿಕುಮಾರ್ ಅವರು ಆರೋಪಿಗಳತ್ತ ನೋಡಿದ್ದರು. ಆಗ ಕೋಪಗೊಂಡ ಆರೋಪಿಗಳು, ‘ಯಾಕೆ ನಮ್ಮನ್ನೇ ಗುರಾಯಿಸುತ್ತಿದ್ದೀಯಾ’ ಎಂದು ಪ್ರಶ್ನಿಸಿ ಜಗಳ ತೆಗೆದಿದ್ದರು. ಬಳಿಕ, ಸ್ಥಳೀಯರು ಜಗಳ ಬಿಡಿಸಿದ್ದರು. ಬಳಿಕ ಶಶಿಕುಮಾರ್ ಅವರಿಗೆ ಬಿಯರ್ ಬಾಟಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದರು ಎಂದು ದೂರು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.