ಬೆಂಗಳೂರು: ಆಟೊರಿಕ್ಷಾ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಟೊರಿಕ್ಷಾ ಚಾಲಕ–ಮಾಲೀಕರ ಸಂಘಟನೆಗಳು ಒಂದು ವಾರದ ಒಳಗೆ ಲಿಖಿತವಾಗಿ ಅಭಿಪ್ರಾಯ ತಿಳಿಸಬೇಕು. ಅದರ ಆಧಾರದಲ್ಲಿ ವರದಿ ಸಿದ್ಧಪಡಿಸಲು ಬೆಂಗಳೂರು ಸಾರಿಗೆ ಪ್ರಾಧಿಕಾರದ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಬೆಂಗಳೂರು ನಗರ ವ್ಯಾಪ್ತಿಯ ಆಟೊ ಪ್ರಯಾಣ ದರಕ್ಕೆ ಸಂಬಂಧಿಸಿದಂತೆ ಬುಧವಾರ ಪೂರ್ವ ಡಿಸಿಪಿ ಕಚೇರಿಯಲ್ಲಿ ಡಿಸಿಪಿ ಸಾಹಿಲ್ ಬಾಗ್ಲಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
2021ರಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಅದೇ ದರ ಮುಂದುವರಿದಿದೆ. ಇಂಧನ ಹಾಗೂ ನಿತ್ಯ ಬಳಕೆಯ ವಸ್ತುಗಳ ದರ ನಾಲ್ಕು ವರ್ಷಗಳಲ್ಲಿ ವಿಪರೀತ ಹೆಚ್ಚಳವಾಗಿದೆ. ಆಗ ಆಟೊ ಚಾಸಿಗೆ ₹ 1.5 ಲಕ್ಷ ಇತ್ತು. ಈಗ ₹2.70 ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ ಆಟೊ ಪ್ರಯಾಣ ದರವನ್ನು ಏರಿಸಬೇಕು ಎಂದು ಹಲವು ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಆಗ್ರಹಿಸಿದರು.
ದರ ಏರಿಕೆ ಮಾಡಿದರೆ ಆಟೊಗಿಂತ ಕ್ಯಾಬ್‌ಗಳೇ ಕಡಿಮೆ ಮೊತ್ತಕ್ಕೆ ಸಂಚರಿಸಲಿವೆ. ಈಗಲೇ ಆಟೊದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ದರ ಏರಿಕೆ ಮಾಡಿದರೆ ಅವರೂ ಬರುವುದಿಲ್ಲ. ಹಾಗಾಗಿ ಈಗಿರುವ ದರವೇ ಸಾಕು. ಆ್ಯಪ್ ಆಧಾರಿತ ಬೈಕ್, ಆಟೊ, ಟ್ಯಾಕ್ಸಿಗಳಿಗೆ ಕಡಿವಾಣ ಹಾಕುವ ಮೂಲಕ ಆಟೊಗಳಿಗೆ ದುಡಿಮೆ ಹೆಚ್ಚು ಸಿಗುವಂತೆ ಮಾಡಬೇಕು ಎಂದು ಕೆಲವು ಸಂಘಟನೆಗಳ ಪದಾಧಿಕಾರಿಗಳು ದರ ಪರಿಷ್ಕರಣೆಯನ್ನು ವಿರೋಧಿಸಿದರು.
‘ನಿಮ್ಮ ಅಭಿಪ್ರಾಯಗಳನ್ನು ಒಂದು ವಾರದ ಒಳಗೆ ಲಿಖಿತವಾಗಿ ನೀಡಬೇಕು. ನಾವು ಆಗಿನ ಇಂಧನ ದರ, ಇತರೆ ವೆಚ್ಚಗಳನ್ನು ಮತ್ತು ಈಗಿನ ಇಂಧನ ದರ, ಇತರೆ ವೆಚ್ಚಗಳನ್ನು ತಾಳೆ ಮಾಡಿ ನೋಡಿ, ನಿಮ್ಮ ಅಭಿಪ್ರಾಯಗಳನ್ನೂ ಪರಿಗಣಿಸಿ ವರದಿ ತಯಾರು ಮಾಡುತ್ತೇವೆ. ಅದನ್ನು ನಗರ ಜಿಲ್ಲಾಧಿಕಾರಿಗೆ ಸಲ್ಲಿಸುತ್ತೇವೆ. ಅವರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಪನಶಾಸ್ತ್ರ ಅಧಿಕಾರಿ ಸೀಮಾ, ಶಾಂತಿನಗರ ಎಸ್.ಟಿ.ಯು ಮತ್ತು ಆಟೊರಿಕ್ಷಾ ಪರವಾನಗಿ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯಾ, ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ (ಬೆಂಗಳೂರು ಕೇಂದ್ರ) ಎಲ್. ದೀಪಕ್, ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ (ಬೆಂಗಳೂರು ದಕ್ಷಿಣ) ಎಸ್. ಮಲ್ಲೇಶ್, ವಿವಿಧ ಆಟೊ ಚಾಲಕ–ಮಾಲೀಕರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.