ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಶನಿವಾರ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವು ಮಾಡಿ, ಒತ್ತುವರಿದಾರರಿಗೆ ದಂಡ ವಿಧಿಸಲಾಯಿತು.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವ್ಯಾಪ್ತಿಯಲ್ಲಿ ಅನಧಿಕೃತ ಒಎಫ್‌ಸಿ ತೆರವುಗೊಳಿಸಿ, ಟ್ರ್ಯಾಕ್ಟರ್ ಬಳಸಿ ರಸ್ತೆ ಬದಿ ಸಂಗ್ರಹವಾಗಿದ್ದ ಹೂಳು, ತ್ಯಾಜ್ಯ ಸೇರಿದಂತೆ ಕಟ್ಟಡಗಳ ಭಗ್ನಾವಶೇಷಗಳನ್ನು ತೆರವುಗೊಳಿಸಲಾಯಿತು. ವಿ.ವಿ. ಪುರದ ಸಜ್ಜನ್ ರಾವ್ ವೃತ್ತದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು. ಸಿ.ವಿ. ರಾಮನ್ ನಗರದ 80 ಅಡಿ ರಸ್ತೆಯಲ್ಲಿ ತೀವ್ರ ಸ್ವಚ್ಛತಾ ಕಾರ್ಯ ನಡೆಸಿ, ಎಂಪೈರ್ ಹೋಟೆಲ್ ನವರು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದರಿಂದ ₹10 ಸಾವಿರ ದಂಡ ವಿಧಿಸಿ, ಮತ್ತೆ ಒತ್ತುವರಿ ಮಾಡದಂತೆ ಬಿಬಿಎಂಪಿ ಸಿಬ್ಬಮದಿ ಎಚ್ಚರಿಕೆ ನೀಡಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆಯ ಸರ್ಜಾಪುರ ರಸ್ತೆಯ ಬೃಹತ್ ನೀರುಗಾಲುವೆ ಹಾಗೂ ಸೈಡ್ ಡ್ರೈನ್‌ಗಳ ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು. ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ಇರಿಸಲಾಗಿದ್ದ ಪೆಟ್ಟಿಗೆ ಅಂಗಡಿ, ಅಂಗಡಿ ಸಾಮಗ್ರಿಗಳು ತೆರವುಗೊಳಿಸಿ, ಮುಂದಿನ ದಿನಗಳಲ್ಲಿ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮಲ್ಲತಹಳ್ಳಿ ವಾರ್ಡ್‌ನ ಶ್ರೀಗಂಧಕಾವಲ್ ಉಪವಿಭಾಗ, ಕೆಂಗೇರಿ ವಿಭಾಗದ ಸುಭಾಷ್ ನಗರ, ಮಾರುತಿ ಮಂದಿರ ವಾರ್ಡ್, ಮಹಾಲಕ್ಷ್ಮೀಪುರ ವಾರ್ಡ್, ಕೆಂಗೇರಿ ವಿಭಾಗ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಸಾರಕ್ಕಿ ಮುಖ್ಯರಸ್ತೆ ಹಾಗೂ ಜೆ.ಪಿ ನಗರ ಮೊದಲನೇ ಹಂತದ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ನಡೆಸಲಾಯಿತು. ಸಾರಕ್ಕಿ ಮಾರುಕಟ್ಟೆಯ ಮುಂಭಾಗದಲ್ಲಿನ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಅಂಗಡಿಗಳು, ನಾಮಫಲಕಗಳನ್ನು ತೆರವುಗೊಳಿಸಿ, ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಮೆಜೆಸ್ಟಿಕ್ ಬಳಿ ಮೊಬೈಲ್ ಶೌಚಾಲಯ
'ಮೆಜೆಸ್ಟಿಕ್ ಬಳಿ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸಲು ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಬೇಕು’ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂಭಾಗದ ಆಟೊ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ‘ಮೆಜೆಸ್ಟಿಕ್ ಪ್ರದೇಶದಲ್ಲಿ ಪಾದಚಾರಿಗಳ ಸಂಚಾರ ಹೆಚ್ಚು ಇರುವುದರಿಂದ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಬೇಕು. ಇದರಿಂದ ಪಾದಚಾರಿ ಮಾರ್ಗದ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಿ ಸ್ವಚ್ಛತೆ ಕಾಪಾಡಬಹುದಾಗಿದೆ’ ಎಂದು ತಿಳಿಸಿದರು.
ಓಕಳಿಪುರಂನಂತಹ ಪ್ರಮುಖ ಜಂಕ್ಷನ್‌ಗಳಲ್ಲಿ ತೀವ್ರ ಸ್ವಚ್ಛತೆ ಮಾಡಬೇಕು. ಧನ್ವಂತರಿ ರಸ್ತೆಯಲ್ಲಿ ಹಾಕಲಾಗಿರುವ (ರೈಲ್ವೆ ಜಾಗದ ಎದುರು) ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸಬೇಕು. ಪಾದಚಾರಿ ಮಾರ್ಗದಲ್ಲಿ ಹಾಳಾಗಿರುವ ಕರ್ಬ್ ಸ್ಟೋನ್ ಗಳು ಸ್ಲ್ಯಾಬ್ ಗಳನ್ನು ಬದಲಾಯಿಸಬೇಕೆಂದು ಸೂಚನೆ ನೀಡಿದರು. ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳ ಹೋಟೆಲ್‌ಗಳು ಹಾಗೂ ವಾಣಿಜ್ಯ ಮಳಿಗೆಗಳ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಸಂಬಂಧ ಎಲ್ಲಾ ಮಳಿಗೆಗಳ ಮುಂಭಾಗ ವಿಶೇಷ ಡಸ್ಟ್ ಬಿನ್‌ಗಳನ್ನು ಅಳವಡಿಸಿಕೊಳ್ಳಲು ಅವರಿಗೆ ಸೂಚನೆ ನೀಡಬೇಕು. ಅದನ್ನು ಪಾಲಿಸದಿರುವವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು. ಜಂಕ್ಷನ್‌ಗಳಲ್ಲಿ ತೋಟಗಾರಿಕಾ ವಿಭಾಗದ ವತಿಯಿಂದ ಸಸಿಗಳನ್ನು ನೆಟ್ಟು ಸಂರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ನೆಟ್ಟಿರುವ ಸಸಿಗಳನ್ನು ಸರಿಯಾಗಿ ಪೋಷಣೆ ಮಾಡಬೇಕು ಹಾಗೂ ಸಸಿಗಳ ಸುತ್ತಲು ಗ್ರಿಲ್ ಅಳವಡಿಸಬೇಕೆಂದು ಸೂಚನೆ ನೀಡಿದರು.
‘ನಾಗರಿಕರಿಗೆ ಆದ್ಯತೆ ಇರಲಿ ಅಧಿಕಾರಿಗಳಿಗಲ್ಲ’
ಬೆಂಗಳೂರು ಉತ್ತರ ನಗರ ಪಾಲಿಕೆಯ ಸಮಗ್ರ ಬೆಳವಣಿಗೆಗಾಗಿ ಕರ್ತವ್ಯ ನಿರ್ವಹಿಸಲು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಕರೆ ನೀಡಿದರು. ಯಲಹಂಕ ಎನ್.ಇ.ಎಸ್ ವೃತ್ತದ ಬಳಿಯ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅಧಿಕಾರಿ/ನೌಕರರ ಪರಿಚಯ ಹಾಗೂ ವಿಚಾರ ವಿನಿಮಯ ಸಭೆಯಲ್ಲಿ ಅವರು ಮಾತನಾಡಿದರು.
‘ಅಧಿಕಾರಿಗಳಿಗೆ ಸೌಲಭ್ಯಗಳಿರಲಿ ಇಲ್ಲದಿದಲಿ ನಾಗರಿಕಗೆ ಮೊದಲ ಆದ್ಯತೆ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಅದನ್ನು ಬಗೆಹರಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಅದರ ಜೊತೆಗೆ ಅಧಿಕಾರಿ/ಸಿಬ್ಬಂದಿಯ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಹುಡುಕಿ ಬಗೆಹರಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
‘ಅಧಿಕಾರಿಗಳು ಸ್ಥಳೀಯವಾಗಿರುವ ಸಮಸ್ಯೆಗಳನ್ನು ಅರ್ಥೈಸಿಕೊಂಡು ಬಗೆಹರಿಸುವ ಕೆಲಸ ಮಾಡಬೇಕು. ಕರ್ತವ್ಯ ನಿರ್ಲಕ್ಷಿಸುವವರ ವಿರುದ್ದ ಕ್ರಮಕೈಗೊಳ್ಳಲಾಗುವುದು’ ಎಂದರು. ವಿದ್ಯುತ್ ವಿಭಾಗದ ಎಂಜಿನಿಯರ್ ಹಾಗೂ ಸಿಬ್ಬಂದಿ ಮೂರು ದಿನಗಳಲ್ಲಿ ಎಲ್ಲ ಪ್ರದೇಶಗಳ ತಪಾಸಣೆ ನಡೆಸಿ ಬೀದಿಗಳಲ್ಲಿ ಹಾಗೂ ಉದ್ಯಾನಗಳಲ್ಲಿ ದೀಪಗಳನ್ನು ಸರಿಪಡಿಸಿ ವರದಿ ಸಲ್ಲಿಸಲು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.