ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಯ ಹಳೆಯ ಕಟ್ಟಡದ ಪಕ್ಕದಲ್ಲಿರುವ ರೇಸ್‌ಕೋರ್ಸ್ ಪಾರ್ಕಿಂಗ್ ಶೆಡ್‌ನಲ್ಲಿನ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯನಗರ ನಿವಾಸಿ ಯೋಗೇಶ್, ಕಮಲ್ ನಗರದ ಮಂಜುನಾಥ್ ಮತ್ತು ವಸಂತ್ ಎಂಬುವರನ್ನು ಬಂಧಿಸಿ, ₹2 ಲಕ್ಷ ನಗದು ಹಾಗೂ ಮೂರು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
‘ನವೆಂಬರ್ 29ರಂದು ಆರೋಪಿಗಳು ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ಆಡಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ, ನಗದು, ಮೊಬೈಲ್, ರೇಸ್ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳು ಪರವಾನಗಿ ಇಲ್ಲದೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಟರ್ಫ್ ಕ್ಲಬ್ ಅವರ ಗಮನಕ್ಕೆ ಬಾರದಂತೆ ಬೆಟ್ಟಿಂಗ್ ನಡೆಸುತ್ತಿದ್ದರು. ಆರೋಪಿಗಳ ಪೈಕಿ ಮಂಜುನಾಥ್ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಫ್ರೀಜ್ ಮಾಡಲು ಕೋರಲಾಗಿದೆ’ ಎಂದು ಹೇಳಿದ್ದಾರೆ.
ಸಿಸಿಬಿ ಇನ್‌ಸ್ಪೆಕ್ಟರ್ ಎಸ್.ಆರ್.ವೀರೇಂದ್ರ ಪ್ರಸಾದ್ ಅವರ ದೂರು ಆಧರಿಸಿ, ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.