ADVERTISEMENT

ಬೆಂಗಳೂರು: 33 ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿ

ಟಿ.ಸಿ ಪಾಳ್ಯದ ಸಿಗ್ನಲ್ ಬಳಿಯ ಶೋರೂಂನಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 14:46 IST
Last Updated 22 ಜನವರಿ 2026, 14:46 IST
ಬೆಂಕಿ ಅವಘಡದಲ್ಲಿ ಭಸ್ಮವಾಗಿರುವ ದ್ವಿಚಕ್ರ ವಾಹನ 
ಬೆಂಕಿ ಅವಘಡದಲ್ಲಿ ಭಸ್ಮವಾಗಿರುವ ದ್ವಿಚಕ್ರ ವಾಹನ    

ಕೆ.ಆರ್.ಪುರ: ದ್ವಿಚಕ್ರ ವಾಹನ ಶೋರೂಂ ಹಾಗೂ ಸರ್ವಿಸ್ ಸೆಂಟರ್‌ನಲ್ಲಿ ಬುಧವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿ, 33 ಬೈಕ್‌ಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ ಕಂಪ್ಯೂಟರ್‌, ಟೇಬಲ್‌, ಬ್ಯಾಟರಿ, ದಾಖಲೆಗಳು, ಪ್ರಿಂಟರ್‌, ಲ್ಯಾಪ್‌ಟಾಪ್‌ ಹಾಗೂ ಬೈಕ್‌ ರಿಪೇರಿ ಉಪಕರಣಗಳು ಭಸ್ಮವಾಗಿವೆ. ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಟಿ.ಸಿ ಪಾಳ್ಯ ಸಿಗ್ನಲ್ ಬಳಿ ಇರುವ ಬಜಾಜ್ ಕಂಪನಿಯ ಪ್ರವೀಣ್ ಮೋಟಾರ್ಸ್‌ ದ್ವಿಚಕ್ರ ವಾಹನ ಶೋರೂಂ ಹಾಗೂ ಸರ್ವೀಸ್‌ ಸೆಂಟರ್‌ನಲ್ಲಿ ಬುಧವಾರ ರಾತ್ರಿ 10.30ರ ಸುಮಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಬುಧವಾರ ರಾತ್ರಿ ಸಿಬ್ಬಂದಿ, ಶೋರೂಂ ಬಂದ್ ಮಾಡಿ ಮನೆಗೆ ತೆರಳಿದ್ದರು. ರಸ್ತೆಯಲ್ಲಿ ಸಾಗುವವರು ಶೋರೂಂನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಬಹುತೇಕ ಉಪಕರಣಗಳು ಹಾಗೂ ದ್ವಿಚಕ್ರ ವಾಹನಗಳು ಭಸ್ಮವಾಗಿದ್ದವು.

ಶೋರೂಂ ಬಂದ್ ಆಗಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪ್ರವೀಣ್‌ ಕುಮಾರ್ ಎಂಬುವವರಿಗೆ ಸೇರಿದ ಶೋರೂಂನಲ್ಲಿ 13 ಹೊಸ ಬೈಕ್ ಹಾಗೂ 30 ಸರ್ವಿಸ್ ಬೈಕ್‌ಗಳು ಸುಟ್ಟುಹೋಗಿವೆ.

ADVERTISEMENT

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೆ.ಆರ್. ಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನಾ ಕಾರ್ಯ ಪೂರ್ಣವಾದ ಮೇಲೆಯೇ ಘಟನೆಗೆ ಕಾರಣ ಏನು ಎಂಬುದು ಪತ್ತೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಮುನ್ನೆಚ್ಚರಿಕೆ ತೆಗೆದುಕೊಳ್ಳದ ಮಾಲೀಕರು: 2024ರ ನವೆಂಬರ್‌ನಲ್ಲಿ ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಮೈ ಇ.ವಿ(ಎಲೆಕ್ಟ್ರಿಕ್‌) ಸ್ಕೂಟರ್‌ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಜೀವ ದಹನ ಆಗಿದ್ದರು. 2025ರ ಜನವರಿಯಲ್ಲಿ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ನಾರಾಯಣಪುರದ ಗೋವಿಂದಪ್ಪ ಕಾಂಪ್ಲೆಕ್ಸ್‌ ಬಳಿಯ ಯಮಹಾ ಬೈಕ್ ಶೋರೂಂನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿ, 52 ದ್ವಿಚಕ್ರ ವಾಹನಗಳು ಸುಟ್ಟು ಹೋಗಿದ್ದವು.

2025ರ ಜನವರಿ 17ರಂದು ರಾಜ್‌ಕುಮಾರ್‌ ರಸ್ತೆಯಲ್ಲಿಯೇ ಇರುವ ಒಕಿನೋವಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿದ್ದ(ಇ.ವಿ) ಶೋರೂಂನಲ್ಲೂ ಇಂತಹದ್ದೇ ಅವಘಡ ಸಂಭವಿಸಿ 19 ಸ್ಕೂಟರ್‌ಗಳು ಭಸ್ಮವಾಗಿದ್ದವು.

ಶೋರೂಂಗಳಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಾರ್ಗಸೂಚಿ ಪಾಲಿಸುವಂತೆ ಹಿಂದೆಯೇ ಸೂಚನೆ ನೀಡಲಾಗಿತ್ತು. ಮತ್ತೊಮ್ಮೆ ಆದೇಶ ಹೊರಡಿಸಲಾಗುವುದು ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.

ಬೆಂಕಿ ಅವಘಡದಲ್ಲಿ ಭಸ್ಮವಾಗಿರುವ ಟೇಬಲ್ ಹಾಗೂ ಕಂಪ್ಯೂಟರ್  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.