ADVERTISEMENT

ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 14:30 IST
Last Updated 18 ಫೆಬ್ರುವರಿ 2025, 14:30 IST
<div class="paragraphs"><p>ಬೆಂಗಳೂರು</p></div>

ಬೆಂಗಳೂರು

   

ಬೆಂಗಳೂರು: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳಲ್ಲಿನ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರು ರಸ್ತೆ ಗುಂಡಿಗಳ ಬಗ್ಗೆ ದೂರಿದರು. ಇದಕ್ಕೆ ಸ್ಪಂದಿಸಿದ ಮುಖ್ಯ ಆಯುಕ್ತರು, ‘ಶೀಘ್ರ ಗುಂಡಿಗಳನ್ನು ಮುಚ್ಚಬೇಕು’ ಎಂದು ಸೂಚಿಸಿದರು. ‘15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತದೆ’ ಎಂದು ವಲಯದ ಮುಖ್ಯ ಎಂಜಿನಿಯರ್‌ ಶಶಿಕುಮಾರ್‌ ಭರವಸೆ ನೀಡಿದರು.

ADVERTISEMENT

ಹೊಂಗಸಂದ್ರ ಮೆಟ್ರೊ ನಿಲ್ದಾಣದ ಬಳಿ ರಾಜಕಾಲುವೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಸಮನ್ವಯ ಸಾಧಿಸಿ ಶೀಘ್ರ ಪೂರ್ಣಗೊಳಿಸಬೇಕು. ಕಾಸಾಗ್ರ್ಯಾಂಡ್‌ ಬಳಿಯ ರಾಜಕಾಲುವೆ ಮೇಲೆ ಅಳವಡಿಸಿರುವ ಸ್ಲ್ಯಾಬ್ ತೆರವುಗೊಳಿಸಿ. ತೆರವಿಗೆ ಅಡ್ಡಪಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ತುಷಾರ್‌ ಗಿರಿನಾಥ್‌ ಹೇಳಿದರು.

ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ ಹಳೆಯ ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಒಳಚರಂಡಿ ದುರಸ್ತಿ ಕಾಮಗಾರಿಯನ್ನು ಜಲಮಂಡಳಿ ಮಾಡಲಿದೆ. ಈ ಸಂಬಂಧ ಇನ್ನು ಮುಂದೆ ಪಾಲಿಕೆಯಿಂದ ಯಾವುದೇ ಕಾಮಗಾರಿ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಂಟಿ ಮನೆ ನಿರ್ಮಾಣಕ್ಕಾಗಿ ಫೆಬ್ರುವರಿ 25ರೊಳಗೆ ಆಯಾ ವಲಯದ ಕಲ್ಯಾಣ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕು. 2022ರಿಂದ 2024ರವರೆಗೆ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಅನುದಾನ ಒದಗಿಸಲಾಗುತ್ತದೆ ಎಂದು ನಾಗರಿಕರಿಗೆ ತಿಳಿಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ವಲಯ ಆಯುಕ್ತೆ ರಮ್ಯಾ, ವಲಯ ಜಂಟಿ ಆಯುಕ್ತ ಅಜಿತ್, ಉಪ ಆಯುಕ್ತ ಡಿ.ಕೆ. ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.