ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬಿಲ್ಡರ್ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಪಾಳದ ದಿನೇಶ್ (32) ಹಾಗೂ ಕಮಲಾ (25) ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಂಪಾಪುರ ರಸ್ತೆಯ ಯಮಲೂರಿನ ನಿವಾಸಿ ಶಿಮಾಂತ್ ಎಸ್. ಅರ್ಜುನ್ ಅವರು ದೂರು ನೀಡಿದ್ದಾರೆ.
₹17.73 ಕೋಟಿಯ 11.5 ಕೆ.ಜಿ ಚಿನ್ನ ಹಾಗೂ ವಜ್ರದ ಆಭರಣ, ₹14.60 ಲಕ್ಷ ಮೌಲ್ಯದ 5 ಕೆ.ಜಿ ಬೆಳ್ಳಿಯ ಸಾಮಗ್ರಿ, ₹11.50 ಲಕ್ಷ ನಗದು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಿನೇಶ್ ಹಾಗೂ ಕಮಲಾ ಅವರನ್ನು ಮನೆಯ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಅವರೇ ಕೃತ್ಯ ಎಸಗಿ ಪರಾರಿ ಆಗಿದ್ದಾರೆ. ಮನೆಯ ಮೊದಲ ಮಹಡಿಯ ಬೆಡ್ ರೂಂನಲ್ಲಿದ್ದ ಲಾಕರ್ ಅನ್ನು ಸಲಾಕೆಯಿಂದ ಮೀಟಿ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಶಿಮಂತ್ ಎಸ್. ಅರ್ಜುನ್ ಅವರ ತಂದೆ ಎಂ.ಆರ್.ಶಿವಕುಮಾರ್ ಅವರು ಬಿಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ. 19 ವರ್ಷದಿಂದ ಕೆಂಪಾಪುರ ರಸ್ತೆಯ ಯಮಲೂರಿನ ಎಎಸ್‌ಕೆ ಲೇಕ್ ಗಾರ್ಡನ್‌ನಲ್ಲಿ ವಾಸವಿದ್ದಾರೆ. ಅವರ ಮನೆಯಲ್ಲಿ ಸಿದ್ದರಾಜು, ಅಂಬಿಕಾ (ಅಡುಗೆ ಸಿಬ್ಬಂದಿ) ಹಾಗೂ ದಿನೇಶ್, ಕಮಲಾ (ಮನೆ ಕೆಲಸ) ಅವರು ಕೆಲಸ ಮಾಡುತ್ತಿದ್ದರು. ವಿಕಾಸ್ ಹಾಗೂ ಮಾಯಾ ವಿಷ್ಣು ಎಂಬುವವರ ಮೂಲಕ 20 ದಿನಗಳ ಹಿಂದೆ ದಿನೇಶ್ ಹಾಗೂ ಕಮಲಾ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಎಂ.ಆರ್.ಶಿವಕುಮಾರ್ ಅವರು ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಜ.25ರಂದು ಬೆಳಿಗ್ಗೆ ಶಿಮಂತ್ ಎಸ್.ಅರ್ಜುನ್ ಅವರ ತಾಯಿ ಮಾಲಿನಿ ಹಾಗೂ ಪತ್ನಿ ತನ್ಮಯಾ ಅವರು ಸಂಬಂಧಿಯೊಬ್ಬರು ಆಯೋಜಿಸಿದ್ದ ಭೂಮಿ ಪೂಜೆಗೆ ತೆರಳಿದ್ದರು. ಅಂದೇ ಮಧ್ಯಾಹ್ನ 12.30ರ ಸುಮಾರಿಗೆ ಅಂಬಿಕಾ ಅವರು ಕರೆ ಮಾಡಿ, ದಿನೇಶ್ ಹಾಗೂ ಕಮಲಾ ಅವರು ಲಾಕರ್‌ನಲ್ಲಿದ್ದ ಆಭರಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದರು. ಕೆಂಪಾಪುರ ರಸ್ತೆಯ ಯಮಲೂರಿನಲ್ಲಿರುವ ಮನೆಗೆ ತೆರಳಿ ನೋಡಿದಾಗ ₹ 18 ಕೋಟಿ ಮೌಲ್ಯದ ಆಭರಣ ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿತ್ತು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.