ADVERTISEMENT

ಬೆಂಗಳೂರು | ಕಾವೇರಿ ನೀರು ದರ: ಕೊಂಚ ಇಳಿಕೆ

ಅಪಾರ್ಟ್‌ಮೆಂಟ್‌, ಪಿಜಿಗಳ ಹೊರೆ ತಗ್ಗಿಸಿದ ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ಬೆಂಗಳೂರು ಜಲಮಂಡಳಿ ಲೋಗೋ
ಬೆಂಗಳೂರು ಜಲಮಂಡಳಿ ಲೋಗೋ   

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕಳೆದ ಏಪ್ರಿಲ್‌ನಲ್ಲಿ ಕಾವೇರಿ ನೀರು ಹಾಗೂ ಒಳಚರಂಡಿ ಸ್ವಚ್ಛತೆಯ ದರವನ್ನು ಏರಿಕೆ ಮಾಡಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅಪಾರ್ಟ್‌ಮೆಂಟ್‌ ಹಾಗೂ ಪೇಯಿಂಗ್‌ ಗೆಸ್ಟ್‌ಗಳಿಗೆ(ಪಿಜಿ) ನಿಗದಿಪಡಿಸಿರುವ ದರದಲ್ಲಿ ಕೊಂಚ ಇಳಿಕೆ ಮಾಡಿದೆ.

ಹೊಸ ಆದೇಶದ ಪ್ರಕಾರ ಈ ತಿಂಗಳಿನಿಂದ 2,000 ಮನೆಗಳಿಗಿಂತ ಕಡಿಮೆ ಇರುವ ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ದರ ತಗ್ಗಲಿದೆ. 2,000ಕ್ಕಿಂತ ಹೆಚ್ಚು ಮನೆಗಳಿರುವ ಅಪಾರ್ಟ್‌ಮೆಂಟ್‌ಗಳ ನೀರಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತಿಯೊಂದು ಮನೆಯವರು ನಿತ್ಯ 200 ಲೀಟರ್‌ವರೆಗೆ ಕಿಲೋ ಲೀಟರ್‌ಗೆ ₹32ರಂತೆ ದರ ಪಾವತಿಸಬೇಕಾಗುತ್ತದೆ. 200 ಲೀಟರ್‌ಗಿಂತ ಹೆಚ್ಚು ಬಳಸಿದರೆ ಆಗ ಕಿಲೋ ಲೀಟರ್‌ಗೆ ದರ ₹ 55 ಆಗಲಿದೆ.

ADVERTISEMENT

ಪಿಜಿ ಮಾಲೀಕರ ಸಂಘದ ಮನವಿ ಮೇರೆಗೆ ಸ್ವಚ್ಛತಾ ಶುಲ್ಕವನ್ನು ಶೇ 60 ಕಡಿಮೆ ಮಾಡಲಾಗಿದೆ. 20ಕ್ಕಿಂತ ಹೆಚ್ಚು ಕೊಠಡಿಗಳು ಇರುವ ಪಿಜಿಗಳಿಗೆ ₹7500 ಮಾಸಿಕ ಶುಲ್ಕ ಪಾವತಿಸುವಂತೆ ಸೂಚಿಸಲಾಗಿತ್ತು, ಈಗ ₹3 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. ಮೊದಲು ಈ ಶುಲ್ಕ ₹1 ಸಾವಿರ ಮಾತ್ರ ಇತ್ತು.

‘ಮೊದಲು ದರ ನಿಗದಿಪಡಿಸಿದಾಗ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗಳ ಸಂಖ್ಯೆಯನ್ನು ಪರಿಗಣಿಸಿರಲಿಲ್ಲ. ಬಳಿಕ ಒಕ್ಕೂಟದಿಂದ ಮಂಡಳಿಗೆ ಮನವಿ ಸಲ್ಲಿಸಿ ಕಡಿಮೆ ಮನೆಗಳಿರುವ ಅಪಾರ್ಟ್‌ಮೆಂಟ್‌ಗಳ ಮೇಲೆ ವಿಧಿಸಿರುವ ನೀರಿನ ಶುಲ್ಕ ತಗ್ಗಿಸಲು ಕೋರಿದ್ದೆವು. ಸದ್ಯ 2000ಕ್ಕಿಂತ ಹೆಚ್ಚು ಮನೆಗಳಿರುವ ಬೃಹತ್‌ ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ಬಿಲ್‌ ಬರಬಹುದು. ಬೇರೆ ಅಪಾರ್ಟ್‌ಮೆಂಟ್‌ಗಳಿಗೆ ಹೊರೆಯಂತೂ ತಗ್ಗಲಿದೆ’ ಎಂದು ಬೆಂಗಳೂರು ಅಪಾರ್ಟ್‌ಮೆಂಟ್‌ ಒಕ್ಕೂಟದ( ಬಿಎಎಫ್‌) ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ತಿಳಿಸಿದರು.

‘ನಮ್ಮ ಮನವಿಗೆ ಸ್ಪಂದಿಸಿ ಜಲಮಂಡಳಿಯು ಸ್ವಚ್ಚತಾ ದರ ಕಡಿಮೆ ಮಾಡಿರುವುದು ಸಂತಸ ತಂದಿದೆ’ ಎಂದು ಪಿಜಿ ಮಾಲೀಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಡಿ.ಟಿ.ಅರುಣ್‌ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.