ಬೆಂಗಳೂರು: ಕ್ಯಾಬ್ ಚಾಲಕನ ಅಪಹರಣ ಮಾಡಿ, ಕಾರು ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದ ರೌಡಿಶೀಟರ್ ಸೇರಿ ಇಬ್ಬರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರದ ಟಿ.ಸಿ.ಪಾಳ್ಯ ನಿವಾಸಿ ಶ್ರೀಕಾಂತ್(23) ಮತ್ತು ಹೇಮಂತ್ ಕುಮಾರ್(27) ಬಂಧಿತರು.
ಆರೋಪಿಯಿಂದ ₹8 ಲಕ್ಷ ಮೌಲ್ಯದ ಒಂದು ಕಾರು ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದರು.
ಆರೋಪಿಗಳು, ಆ.27ರಂದು ದೊಮ್ಮಲೂರಿನ ಹೊರವರ್ತುಲ ರಸ್ತೆಯಲ್ಲಿ ಕ್ಯಾಬ್ ಚಾಲಕನನ್ನು ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.
ಆ.2ರಂದು ನಸುಕಿನ ಜಾವ , ಕ್ಯಾಬ್ ಚಾಲಕ ದೊಮ್ಮಲೂರು ರಸ್ತೆಯಲ್ಲಿ ಬಾಡಿಗೆಗೆ ಹೋಗುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಆರೋಪಿಗಳು ಕ್ಯಾಬ್ ಅಡ್ಡಗಟ್ಟಿದ್ದರು. ಬಳಿಕ ಮಾರಕಾಸ್ತ್ರ ತೋರಿಸಿ ಕ್ಯಾಬ್ ಸಮೇತ ಚಾಲಕನನ್ನು ಅಪಹರಿಸಿದ್ದರು. ಬೈಯಪ್ಪನಹಳ್ಳಿ, ಕೆ.ಆರ್.ಪುರ ಹಾಗೂ ಇತರೆಡೆ ಸುತ್ತಾಡಿಸಿ ಚಾಲಕನನ್ನು ಕೆಳಗೆ ಇಳಿಸಿ ಕ್ಯಾಬ್ ಮತ್ತು ಆತನ ಮೊಬೈಲ್ ಕಸಿದುಕೊಂಡು ಪರಾರಿ ಆಗಿದ್ದರು. ಈ ಸಂಬಂಧ ಕ್ಯಾಬ್ ಚಾಲಕ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು.
ಆರೋಪಿಗಳ ಪೈಕಿ, ಶ್ರೀಕಾಂತ್ ರೌಡಿಶೀಟರ್. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಐದು ಕಳವು, ದರೋಡೆ, ಹಲ್ಲೆ ಪ್ರಕರಣಗಳು ದಾಖಲಾಗಿವೆ. ಹೇಮಂತ್ ಕುಮಾರ್ ವಿರುದ್ಧ ಎರಡು ಠಾಣೆಗಳಲ್ಲಿ ಕಳವು, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.