ADVERTISEMENT

ಬೆಂಗಳೂರು: ದರೋಡೆ; ಏಳು ಕೋಟಿಗೂ ಅಧಿಕ ನಗದು ವಶ

ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 16:17 IST
Last Updated 25 ನವೆಂಬರ್ 2025, 16:17 IST
ಆರೋಪಿಗಳಿಂದ ನಗದು ಜಪ್ತಿ
ಆರೋಪಿಗಳಿಂದ ನಗದು ಜಪ್ತಿ   

ಬೆಂಗಳೂರು: ಸಿಎಂಎಸ್ ಏಜೆನ್ಸಿ ವಾಹನ ಅಡ್ಡಗಟ್ಟಿ ನಗದು ದರೋಡೆ ಮಾಡಿದ ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಿ, ₹7,01,24000 ನಗದು (ಶೇಕಡ 98.6 ರಷ್ಟು) ವಶಪಡಿಸಿಕೊಂಡಿದ್ದು, ಉಳಿದ ಹಣವನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಹೇಳಿದರು.

ಆರೋಪಿಗಳಿಂದ ದ್ವಿಚಕ್ರ ವಾಹನ, ಎರಡು ಮೊಬೈಲ್ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಇಲಾಖೆಗೆ ಸವಾಲಾಗಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಕಾರ್ಯಾಚರಣೆಯ ವೇಳೆ ಚೆನ್ನೈ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಪೊಲೀಸರು ಮತ್ತು ರೈಲ್ವೆ ರಕ್ಷಣಾ ದಳದವರು ಸಹಾಯ ಮಾಡಿದ್ದಾರೆ. ಈಗಾಗಲೇ ತಂಡಕ್ಕೆ ₹ 5 ಲಕ್ಷ ಬಹುಮಾನ ಘೋಷಿಸಿದ್ದು, ಹೆಚ್ಚುವರಿಯಾಗಿ ₹2 ಲಕ್ಷ ನಗದು ಬಹುಮಾನ ನೀಡಲಾಗುವುದು. 9 ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಘಟನೆ ನಡೆದ ಬಳಿಕ ಕಾರ್ಯಾಚರಣೆ ನಡೆಸಿ 54 ತಾಸಿನೊಳಗೆ ಮೂವರು ಆರೋಪಿಗಳನ್ನು ಬಂಧಿಸಿ ₹5.76 ಕೋಟಿ ನಗದು ವಶಪಡಿಸಿಕೊಳ್ಳಲಾಯಿತು. ನವೆಂಬರ್ 23 ರಂದು ಹೈದರಾಬಾದ್‌ನ ನಾಪಳ್ಳಿ ಮೆಟ್ರೊ ನಿಲ್ದಾಣ ಬಳಿ ಮೂವರನ್ನು ಬಂಧಿಸಿ ₹57.74 ಲಕ್ಷ ನಗದು ಹಾಗೂ ಅದೇ ದಿನ ಹಲಸೂರು ಲೇಕ್‌ ಕಮ್ಮಹಳ್ಳಿ ಬಿಡಿಎ ಫ್ಲಾಟ್‌ ಬಳಿ ಮತ್ತೊಬ್ಬ ಆರೋಪಿಯನ್ನು ₹3 ಲಕ್ಷ ನಗದು ಸಮೇತ ವಶಕ್ಕೆ ಪಡೆಯಲಾಯಿತು.

ನವೆಂಬರ್ 24ರಂದು ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ಆರೋಪಿ ಮನೆಯಿಂದ ₹57.50 ಲಕ್ಷ ನಗದು, ಸುಮನಹಳ್ಳಿ ಜಂಕ್ಷನ್‌ ಬಳಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ, ₹ 10 ಲಕ್ಷ ನಗದು ಹಾಗೂ ಮತ್ತೊಬ್ಬ ಆರೋಪಿ ಮನೆಯಿಂದ ₹20 ಲಕ್ಷ ನಗದು ವಶಕ್ಕೆ ಪಡೆಯಲಾಗಿತ್ತು. ಇತರೆ ಆರು ಆರೋಪಿಗಳಿಂದ ₹1.45 ಕೋಟಿ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ:

ದರೋಡೆ ಪ್ರಕರಣದಲ್ಲಿ ಬಂಧಿತ 9 ಆರೋಪಿಗಳ ಪೈಕಿ ರವಿ ಎಂಬಾತ 2018ರಲ್ಲಿ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ಗೊತ್ತಾಗಿದೆ. ಕೃತ್ಯ ಎಸಗಿದ ಏಳು ವರ್ಷಗಳ ಬಳಿಕ ಆರೋಪಿ ಸೆರೆಸಿಕ್ಕಿದ್ದಾನೆ.

ಬಾಣಸವಾಡಿ ರೌಡಿಶೀಟರ್ ಆಗಿದ್ದ ಚೆಲ್ಲಾ ಕುಮಾರ್‌ನನ್ನು 2018ರಲ್ಲಿ ಎದುರಾಳಿ ಗುಂಪು ಹತ್ಯೆಗೈದಿತ್ತು. ಈ ಕೃತ್ಯದಲ್ಲಿ ರವಿ ಕೂಡ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಪೊಲೀಸರು ಆರೋಪಿಯ ಹಿನ್ನೆಲೆ ಕೆದಕಿದಾಗ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆರೋಪಿ ಜಿತೇಶ್ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕಿರುಕುಳ ಹಾಗೂ ಅಪಘಾತ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ 125 ಪೊಲೀಸ್ ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಕಮಿಷನರ್ ಅಭಿನಂದಿಸಿದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅಭಿನಂದಿಸಿದರು
ತಾಂತ್ರಿಕ ಸಾಕ್ಷ್ಯ ವೈಜ್ಞಾನಿಕ ಸಾಕ್ಷ್ಯ ಹಾಗೂ ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು.
ಸೀಮಾಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್

ಸಿಎಂಎಸ್ ಸಿಬ್ಬಂದಿಗೆ ಊಟದ ಚಿಂತೆ

ಸಿಎಂಎಸ್‌ ವಾಹನ ಅಡ್ಡಗಟ್ಟಿ ₹7.11 ಕೋಟಿ ದರೋಡೆ ಆಗಿದ್ದರೂ ಸಿಬ್ಬಂದಿ ತಡವಾಗಿ ಠಾಣೆಗೆ ದೂರು ನೀಡಿದರು. ಇನೊವಾ ಕಾರಿನಲ್ಲಿ ಕಸ್ಟೋಡಿಯನ್ ಗನ್‌ಮೆನ್ ಅನ್ನು ಕರೆದೊಯ್ದಿದ್ದ ದರೋಡೆ ತಂಡ ಮಾರ್ಗಮಧ್ಯೆ ಅವರನ್ನು ಇಳಿಸಿ ತೆರಳಿತ್ತು. ದರೋಡೆಕೋರರು ಇಳಿಸಿದ್ದ ಸ್ಥಳದಿಂದ ಠಾಣೆ ಕೂಗಳತೆ ದೂರದಲ್ಲಿದ್ದರೂ ಸಿಎಂಎಸ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಘಟನೆ ನಡೆದು 2 ಗಂಟೆ ನಂತರ ಪೊಲೀಸರಿಗೆ ವಿಚಾರ ಗೊತ್ತಾಯಿತು. ಹಾಗಾಗಿ ವಾಹನ ಸಿಬ್ಬಂದಿ ಮೇಲೆ  ಮತ್ತಷ್ಟು ಅನುಮಾನ ಮೂಡಿತ್ತು ಎಂದು ಕಮಿಷನರ್ ಹೇಳಿದರು.

ತಡವಾಗಿ ದೂರು ನೀಡಲು ಕಾರಣವೇನು ಎಂದು ಪ್ರಶ್ನಿಸಿದಾಗ ‘ಊಟದ ಸಮಯ ಆಗಿತ್ತು. ಊಟಕ್ಕೆ ಹೋಗಿದ್ದರಿಂದ ಬರಲು ಆಗಿರಲಿಲ್ಲ’ ಎಂದಿದ್ದರು. ಸಿಎಂಎಸ್ ವಾಹನದ ಕಸ್ಟೋಡಿಯನ್ ಗನ್‌ಮೆನ್ ವಿಚಾರಣೆ ನಡೆಸಿದ್ದು ಪ್ರಕರಣದಲ್ಲಿ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ. ಆರ್‌ಬಿಐ ಮೂಲಕ ಸಿಎಂಎಸ್ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.