ADVERTISEMENT

22ನೇ ಚಿತ್ರಸಂತೆ | ಕಲಾ ಅನಾವರಣ: ಆಸಕ್ತರಿಗೆ ರಸದೌತಣ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
ಚಿತ್ರಸಂತೆಗೆ ನಗರದ ವಿವಿಧೆಡೆಯಿಂದ ಕಲಾಸಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾನುವಾರ ಬಂದಿದ್ದರಿಂದ ಕುಮಾರಕೃಪಾ ರಸ್ತೆಯಲ್ಲಿ ಜನದಟ್ಟಣೆ ಉಂಟಾಗಿತ್ತು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಚಿತ್ರಸಂತೆಗೆ ನಗರದ ವಿವಿಧೆಡೆಯಿಂದ ಕಲಾಸಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾನುವಾರ ಬಂದಿದ್ದರಿಂದ ಕುಮಾರಕೃಪಾ ರಸ್ತೆಯಲ್ಲಿ ಜನದಟ್ಟಣೆ ಉಂಟಾಗಿತ್ತು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಕಣ್ಮನ ಸೆಳೆಯುವ ಕಲಾಕೃತಿಗಳು, ನಡುನಡುವೆ ಸ್ಥಳದಲ್ಲಿಯೇ ವ್ಯಕ್ತಿಯ ಭಾವಚಿತ್ರ ಹಾಗೂ ವ್ಯಂಗ್ಯಚಿತ್ರ ರಚಿಸುವ ಕಲಾವಿದರು. ಮಕ್ಕಳು ಮತ್ತು ಉದಯೋನ್ಮುಖ ಕಲಾವಿದರಿಗೆ ಚಿತ್ರ ಬರೆಯಲು ಅಗತ್ಯ ಸಾಮಗ್ರಿಗಳ ಮಾರಾಟ...

ಈ ದೃಶ್ಯ ಕಂಡುಬಂದದ್ದು ಕುಮಾರಕೃಪಾ ರಸ್ತೆಯಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 22ನೇ ಚಿತ್ರಸಂತೆಯಲ್ಲಿ ಕಲಾಲೋಕವೇ ಅನಾವರಣಗೊಂಡಿತ್ತು. ಈ ಚಿತ್ರಸಂತೆಯು ಕಲಾವಿದರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜತೆಗೆ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೂ ಅವಕಾಶ ಒದಗಿಸಿತ್ತು. ಚಿತ್ರಸಂತೆಯು ಕಲಾವಿದರು ಮತ್ತು ಕಲಾಸಕ್ತರ ನಡುವೆ ಬಾಂಧವ್ಯ ಬೆಸೆಯುವ ಸೇತುವೆಯಾಯಿತು. ವರ್ಣಮಯ ಕಲಾಕೃತಿಗಳು ಕಲಾರಸಿಕರ ಸಂಭ್ರಮವನ್ನೂ ಇಮ್ಮಡಿಗೊಳಿಸಿದವು.

ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಲಾಗಿತ್ತು. ಪರಿಷತ್ತಿನ ಪ್ರವೇಶ ದ್ವಾರದಲ್ಲಿಯೇ ಬಾಲಕಿಯ ಬೃಹದಾಕಾರದ ಕಲಾಕೃತಿ ನಿರ್ಮಿಸಲಾಗಿತ್ತು. ಇದು ನೆರೆದಿದ್ದ ಕಲಾಪ್ರೇಮಿಗಳ ಗಮನಸೆಳೆಯಿತು. ಪರಿಷತ್ತಿನ ಆವರಣದಲ್ಲಿ ಕಲಾಕೃತಿಗಳ ಜತೆಗೆ ಕರಕುಶಲ ವಸ್ತುಗಳು ಹಾಗೂ ಕಲಾಕೃತಿ ರಚನೆಗೆ ಅಗತ್ಯವಿರುವ ಬಣ್ಣ ಮತ್ತು ಅಗತ್ಯ ವಸ್ತುಗಳನ್ನೂ ಮಾರಾಟಕ್ಕೆ ಇರಿಸಲಾಗಿತ್ತು.  

ADVERTISEMENT
ಚಿತ್ರಸಂತೆಯಲ್ಲಿ ಮಕ್ಕಳು ಚಿತ್ರಗಳನ್ನು ಬಿಡಿಸುವ ಮೂಲಕ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಹಲವು ಬಗೆಯ ಕಲಾಕೃತಿ:

ಜಲವರ್ಣ, ಆ್ಯಕ್ರಿಲಿಕ್‌, ಮಧುಬನಿ, ತೈಲವರ್ಣ, ಡಿಜಿಟಲ್‌ ಪೇಂಟಿಂಗ್‌, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಕಾಫಿ ಪೇಂಟಿಂಗ್‌, ಮಂಡಲ ಕಲೆ, ಕಲಾಂಕಾರಿ ಕಲೆ ಸೇರಿ ನಾನಾ ಪ್ರಕಾರದ ಕಲಾಕೃತಿಗಳು ಗಮನಸೆಳೆದವು. ಉಬ್ಬು ಚಿತ್ರಗಳು ಕೂಡ ಪ್ರದರ್ಶನದಲ್ಲಿ ಇದ್ದವು.

ಪರಿಸರ, ವನ್ಯಜೀವಿಗಳು, ಐತಿಹಾಸಿಕ ದೇವಸ್ಥಾನಗಳು, ಗ್ರಾಮೀಣ ಸೊಗಡು, ಪೌರಾಣಿಕ ಪಾತ್ರಧಾರಿಗಳು, ಯಕ್ಷಗಾನ ವೇಷಧಾರಿಗಳು, ಮಹಿಳೆಯರ ವಿವಿಧ ಭಂಗಿಗಳು, ಜಾನಪದ ನೃತ್ಯ, ಉತ್ಸವ ಹಾಗೂ ಧಾರ್ಮಿಕ ಆಚರಣೆಗಳು, ವಿಷ್ಣು, ಗಣಪತಿ ಸೇರಿ ವಿವಿಧ ದೇವರು, ನಾಟ್ಯರಾಣಿ ಶಾಂತಲೆ, ಗೌತಮ ಬುದ್ಧ ಹಾಗೂ ಕಾಡು ಹಣ್ಣುಗಳ ಕಲಾಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು.

ಮುಖದ ಮೇಲೆ ಚಿತ್ತಾರ ಮೂಡಿಸಿಕೊಂಡಿದ್ದ ಯುವತಿಯೊಬ್ಬರು ನೆರೆದಿದ್ದವರ ಗಮನ ಸೆಳೆದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ರಸ್ತೆಯ ಉದ್ದಕ್ಕೂ ವ್ಯಕ್ತಿಯ ಭಾವಚಿತ್ರ ಹಾಗೂ ವ್ಯಂಗ್ಯ ಚಿತ್ರಗಳನ್ನು ಬಿಡಿಸುವವರು ಕಾಣಸಿಗುತ್ತಿದ್ದರು. ಪುಟ್ಟ ಮಕ್ಕಳು ಭಾವಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರೆ, ಯುವಕ ಯುವತಿಯರು ಹಚ್ಚೆ ಹಾಕಿಸಿಕೊಂಡು ಖುಷಿಪಟ್ಟರು. ರಕ್ತದಲ್ಲಿ ಕಲಾಕೃತಿ ರಚಿಸಿಕೊಡುವ ಕಲಾವಿದರೂ ಚಿತ್ರಸಂತೆಯಲ್ಲಿದ್ದರು. 

ಚಿತ್ರಕಲಾ ವಿದ್ಯಾಲಯದ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಪ್ರದರ್ಶಿಸಿದರು.

ಕಲಾಸಕ್ತರು ಕಲಾಕೃತಿಗಳ ಫೋಟೊ ಕ್ಲಿಕ್ಕಿಸಿಕೊಂಡರು  ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಚಿತ್ರಸಂತೆಯಲ್ಲಿ ಕಲಾವಿದನೊಬ್ಬ ಯುವತಿಯ ಭಾವಚಿತ್ರ ಬಿಡಿಸಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಚಿತ್ರಸಂತೆಗೆ ಹಲವು ವರ್ಷಗಳಿಂದ ಬರುತ್ತಿದ್ದೇನೆ. ಹೆಚ್ಚಾಗಿ ಉತ್ಸವಗಳ ಕಲಾಕೃತಿ ರಚಿಸುತ್ತಿದ್ದು ಕಲಾಸಕ್ತರಿಂದ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ
ಮೀನಾಕ್ಷಿ ಸದಲಗಿ ಕಲಾವಿದೆ 
ಚಿತ್ರಸಂತೆಯಲ್ಲಿ ಇರಿಸಲಾಗಿದ್ದ ಕಲಾಕೃತಿಗಳನ್ನು ಕಲಾಪ್ರೇಮಿಗಳು ಕುತೂಹಲದಿಂದ ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದೆ. ಕಲಾಕೃತಿಗಳ ಖರೀದಿಗೆ ಜನರು ಆಸಕ್ತಿ ತೋರುತ್ತಿದ್ದಾರೆ
ಉಮೇಶ್ ನಾಯ್ಕ್ ಕಲಾವಿದ
1500 ಕಲಾವಿದರು ಭಾಗಿ
ದೇಶದ ವಿವಿಧ ಭಾಗಗಳಿಂದ 1500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ಪ್ರದರ್ಶಿಸಿದರು. ಕರ್ನಾಟಕದ ಜತೆಗೆ ಕೇರಳ ತಮಿಳುನಾಡು ಆಂಧ್ರಪ್ರದೇಶ ಗೋವಾ ಮಹಾರಾಷ್ಟ್ರ ಪಂಜಾಬ್ ಪಶ್ಚಿಮ ಬಂಗಾಳ ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದರು. ವೃತ್ತಿನಿರತ ಕಲಾವಿದರ ಜತೆಗೆ ಹವ್ಯಾಸಿ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳೂ ಭಾಗವಹಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಶಿವಾನಂದ ಸರ್ಕಲ್‌ನಿಂದ ವಿಂಡ್ಸನ್ ಮ್ಯಾನರ್‌ವರೆಗೆ ಕುಮಾರಕೃಪಾ ರಸ್ತೆಯಲ್ಲಿ ಕ್ರೆಸೆಂಟ್ ರಸ್ತೆಯ ಆಯ್ದ ಸ್ಥಳದಲ್ಲಿ ಗಾಂಧಿಭವನ ರಸ್ತೆಯಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಿತು. ಚಿತ್ರಸಂತೆ ಪ್ರಯುಕ್ತ ಚಿತ್ರಕಲಾ ಪರಿಷತ್ತಿನ 13 ಗ್ಯಾಲರಿಗಳಲ್ಲಿ ಪ್ರದರ್ಶನ ಪ್ರಾರಂಭವಾಗಿದ್ದು ಈ ಗ್ಯಾಲರಿಗಳಲ್ಲಿ ಇದೇ 31ರವರೆಗೂ ಪ್ರದರ್ಶನ ನಡೆಯಲಿದೆ.

₹15 ಲಕ್ಷದವರೆಗಿನ ಕಲಾಕೃತಿ

ಚಿತ್ರಸಂತೆಯಲ್ಲಿ ₹ 1 ಸಾವಿರದಿಂದ ₹15 ಲಕ್ಷದವರೆಗಿನ ಕಲಾಕೃತಿಗಳಿದ್ದವು. ಕೆಲವರು ದುಬಾರಿ ಬೆಲೆ ಕೇಳಿ ಅಚ್ಚರಿಪಟ್ಟರೂ, ಕಲಾವಿದರ ಪ್ರತಿಭೆ ಮತ್ತು ಶ್ರಮಕ್ಕೆ ತಲೆದೂಗಿದರು. ಹೈದರಾಬಾದ್ ಕಲಾವಿದ ಪರಶುರಾಮ್ ಅವರು ತೈಲವರ್ಣ ಬಳಸಿ ಜಲ್ಲಿಕಟ್ಟು ಕ್ರೀಡೆಯನ್ನು ಚಿತ್ರಿಸಿದ್ದು, ಇದಕ್ಕೆ ₹ 15 ಲಕ್ಷ ನಿಗದಿಪಡಿಸಿದ್ದರು. ಇದು ಎಂಟು ಅಡಿ ಉದ್ದ ಹಾಗೂ ಆರು ಅಡಿ ಅಗಲವಿದ್ದು, ಇದಕ್ಕೆ ತೇಗದ ಮರದ ಚೌಕಟ್ಟು ಬಳಸಲಾಗಿದೆ. 

ತಮಿಳುನಾಡಿನ ಕೊಯಮತ್ತೂರು ಕಲಾವಿದ ಜೀವನ್ ವಿ. ಶಕ್ತಿವೇಲು ಅವರು ರಚಿಸಿದ ‘ಚಿತಿರೈ ತಿರುವಿಝಾ’ ಉತ್ಸವದ ಕಲಾಕೃತಿ ಗಮನ ಸೆಳೆಯಿತು. ಇದಕ್ಕೆ ₹ 7 ಲಕ್ಷ ನಿಗದಿಪಡಿಸಲಾಗಿತ್ತು. ಕ್ಯಾನ್ವಾಸ್ ಮೇಲೆ ಚಿತ್ರಿಸಿದ ಈ ಕಲಾಕೃತಿ, 8x6 ಅಡಿಯಿದೆ. ‘ಇದಕ್ಕೆ ಆರು ಇಂಚು ಅಗಲದ ಹಲಗೆಯನ್ನು ಬಳಸಲಾಗಿದ್ದು, ಚಿತ್ರಿಸಲು ಒಂದು ವರ್ಷ ಬೇಕಾಯಿತು’ ಎಂದು ಜೀವನ್ ವಿ. ಶಕ್ತಿವೇಲು ತಿಳಿಸಿದರು. 

ಕೊಯಮತ್ತೂರಿನ ಕಲಾವಿದ ಸತೀಶ್ ಎಂಬುವವರು ಕಲಾಕೃತಿಯೊಂದಲ್ಲಿ ಗಾಂಧೀಜಿ ಸೇರಿ ಜಗತ್ತಿನ 101 ಪ್ರಸಿದ್ಧ ವ್ಯಕ್ತಿಗಳನ್ನು ತಂದಿದ್ದಾರೆ. 3x7 ಅಡಿ ಅಳತೆಯ ಈ ಕಲಾಕೃತಿಗೆ ₹ 4 ಲಕ್ಷ
ಗೊತ್ತುಪಡಿಸಲಾಗಿದ್ದು, ಈ ಚಿತ್ರ ಬರೆಯಲು ಅವರು ಆರು ತಿಂಗಳು ತೆಗೆದುಕೊಂಡಿದ್ದಾರೆ. ಮೈಸೂರಿನ ವಿಂಟೇಜ್ ಹಾರ್ವೆಸ್ಟ್ ತಂಡವು 5x7 ಅಡಿ ಅಳತೆಯ ಮರದ ಕಲಾಕೃತಿಯನ್ನು ನಿರ್ಮಿಸಿದೆ. ಬಾಲಕಿಯೊಬ್ಬಳು ಮಂದಿರ ವೀಕ್ಷಿಸುತ್ತಿರುವ ಈ ಕಲಾಕೃತಿ ₹4 ಲಕ್ಷ ಬೆಲೆ ಹೊಂದಿದೆ.

₹ 5 ಕೋಟಿ ವಹಿವಾಟು
‘ಈ ಬಾರಿಯ ಚಿತ್ರಸಂತೆಯಲ್ಲಿ ಅಂದಾಜು ₹ 5 ಕೋಟಿ ವಹಿವಾಟು ನಡೆದಿದೆ. ಕಳೆದ ಬಾರಿಗಿಂತ ಶೇ 20 ರಷ್ಟು ವಹಿವಾಟು ಹೆಚ್ಚಾಗಿದೆ. 4 ಲಕ್ಷ ಜನರು ಭೇಟಿ ನೀಡಿದ್ದರು’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.