ADVERTISEMENT

ಕಟ್ಟೆಚ್ಚರ ವಹಿಸಲು ಕಮಿಷನರ್ ಸೂಚನೆ: ಬಸ್ ನಿಲ್ದಾಣ, ಮೆಟ್ರೊಗೆ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 2:50 IST
Last Updated 17 ಆಗಸ್ಟ್ 2019, 2:50 IST
   

ಬೆಂಗಳೂರು: ‘ದೇಶದೊಳಗೆ ದುಷ್ಕೃತ್ಯ ಎಸಗಲು ಕೆಲ ಶಂಕಿತರು ಸಂಚು ರೂಪಿಸಿದ್ದಾರೆ’ ಎಂಬುದಾಗಿ ಕೇಂದ್ರ ಗುಪ್ತಚರ ಅಧಿಕಾರಿಗಳು ನೀಡಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ ನಗರದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ದೆಹಲಿ, ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಅದನ್ನು ಉಲ್ಲೇಖಿಸಿ ನಗರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಶುಕ್ರವಾರ ತುರ್ತು ಸಂದೇಶ ಕಳುಹಿಸಿದ್ದಾರೆ.

‘ನಗರದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸುತ್ತಿದ್ದೇನೆ. ಹೆಚ್ಚುವರಿ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿಗಳು, ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು. ಆ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ರೈಲು ನಿಲ್ದಾಣ, ಬೆಂಗಳೂರು ಮೆಟ್ರೊ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣ, ಉನ್ನತ ಶಿಕ್ಷಣ ಸಂಸ್ಥೆಗಳು, ಮಾಲ್, ಪ್ರತಿಷ್ಠಿತ ಹೋಟೆಲ್‌ಗಳು, ಮಾರುಕಟ್ಟೆ ಹಾಗೂ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಭದ್ರತೆಗೆ ಒತ್ತು ನೀಡಬೇಕು’ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

‘ದೇವಸ್ಥಾನ, ಚರ್ಚ್, ಮಸೀದಿ ಮೇಲೂ ಹೆಚ್ಚಿನ ನಿಗಾ ವಹಿಸಬೇಕು. ವಸತಿಗೃಹ, ಅಪಾರ್ಟ್‌ಮೆಂಟ್ ಸಮುಚ್ಚಯಗಳಿಗೂ ಬಿಗಿ ಭದ್ರತೆ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ, ವಶಕ್ಕೆ ಪಡೆದು ವಿಚಾರಣೆ ನಡೆಸಿ’ ಎಂದು ಹೇಳಿದ್ದಾರೆ.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ: ತುರ್ತು ಸಂದೇಶ ಬರುತ್ತಿದ್ದಂತೆ ನಗರದ ಪ್ರತಿ ವಿಭಾಗದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನೂ ಭದ್ರತೆಗೆ ನಿಯೋಜಿಸಲಾಗಿದೆ. ಮೀಸಲು ಪೊಲೀಸ್ ಪಡೆಯನ್ನೂ ಭದ್ರತೆಗೆ ಬಳಸಿಕೊಳ್ಳಲಾಗಿದೆ.

‘ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳ ಮೇಲೆ ನಿಗಾ ವಹಿಸಲಾಗಿದೆ. ಠಾಣೆವಾರು ಭದ್ರತೆ ಜವಾಬ್ದಾರಿಯನ್ನು ಇನ್‌ಸ್ಪೆಕ್ಟರ್‌ಗಳಿಗೆ ವಹಿಸಲಾಗಿದ್ದು, ಎಸಿಪಿಗಳು ಉಸ್ತುವಾರಿ ಮಾಡುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡರೆ ಪೊಲೀಸ್ ನಿಯಂತ್ರಣ ಕೊಠಡಿಗೆ (100) ಮಾಹಿತಿ ನೀಡಬಹುದು’ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪತ್ರ

ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಹೆಸರಿನಲ್ಲಿದ್ದ ತುರ್ತು ಸಂದೇಶದ ಪತ್ರ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.

‘ಅಧಿಕಾರಿಗಳಿಗೆ ತುರ್ತಾಗಿ ಸಂದೇಶ ತಲುಪಿಸುವುದಕ್ಕಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪತ್ರ ಕಳುಹಿಸಲಾಗಿತ್ತು. ಆ ಪತ್ರವೇ ಎಲ್ಲೆಡೆ ಹರಿದಾಡಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.