ADVERTISEMENT

ಬೆಂಗಳೂರು: ಐದು ಪಾಲಿಕೆ ಆಯುಕ್ತರ ನಗರ ಸಂಚಾರ

ರಸ್ತೆ, ಗುಂಡಿ, ಪಾದಚಾರಿ ಮಾರ್ಗ, ತ್ಯಾಜ್ಯ ಸಮಸ್ಯೆ ಪರಿಶೀಲನೆ | ಸ್ವಚ್ಛತೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:20 IST
Last Updated 5 ಸೆಪ್ಟೆಂಬರ್ 2025, 23:20 IST
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್‌. ರಮೇಶ್ ಅವರು ಜಯನಗರದಲ್ಲಿ ನಾಗರಿಕರ ಸಮಸ್ಯೆ ಆಲಿಸಿದರು
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್‌. ರಮೇಶ್ ಅವರು ಜಯನಗರದಲ್ಲಿ ನಾಗರಿಕರ ಸಮಸ್ಯೆ ಆಲಿಸಿದರು   

ಬೆಂಗಳೂರು: ಐದು ನಗರ ಪಾಲಿಕೆಗಳ ಆಯುಕ್ತರು ಅವರ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೆ ಭೇಟಿ ನೀಡಿ, ರಸ್ತೆ, ಚರಂಡಿ, ಗುಂಡಿ, ಪಾದಚಾರಿ ಮಾರ್ಗ, ತ್ಯಾಜ್ಯ ವಿಲೇವಾರಿಯನ್ನು ಪರಿಶೀಲಿಸಿದರು.

ಸ್ವಚ್ಛತೆ ಬಗ್ಗೆ ಹೆಚ್ಚು ಗಮನವಹಿಸಿದ ಆಯುಕ್ತರು, ರಸ್ತೆಯಲ್ಲಿ ತ್ಯಾಜ್ಯ ಇಲ್ಲದಂತೆ ಕ್ರಮ ಕೈಗೊಳ್ಳಬೇಕು, ಪಾದಚಾರಿ ಮಾರ್ಗಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮುಲ ಸುನೀಲ್ ಕುಮಾರ್ ಅವರು,  ಯಲಹಂಕ ಸ್ಯಾಟಲೈಟ್ ವಾರ್ಡ್‌ನಲ್ಲಿ ಆಟೊ ಟಿಪ್ಪರ್ ಮಸ್ಟರಿಂಗ್ ಕೇಂದ್ರ ಹಾಗೂ ತಿಂಡ್ಲು ವಾರ್ಡ್‌ನಲ್ಲಿ ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿಯನ್ನು ಪರಿಶೀಲಿಸಿದರು.

ADVERTISEMENT

‘ಪೌರಕಾರ್ಮಿಕರು ಸರಿಯಾದ ಸಮಯಕ್ಕೆ ಬರಬೇಕು. ಪೌರಕಾರ್ಮಿಕರು ರಸ್ತೆ ಬದಿ ಮಾತ್ರ ಗುಡಿಸುವುದಲ್ಲ, ಶೋಲ್ಡರ್ ಡ್ರೈನ್ ಹಾಗೂ ಪಾದಚಾರಿ ಮಾರ್ಗಗಳಲ್ಲೂ ಗುಡಿಸಿ ಎಲ್ಲಾ ಕಡೆ ಸ್ವಚ್ಛತೆ ಕಾಪಾಡಬೇಕು’ ಎಂದು ಸೂಚಿಸಿದರು.

ಎರಡು ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಿದ ಪೊಮ್ಮುಲ ಸುನೀಲ್‌ಕುಮಾರ್, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲು ಸೂಚಿಸಿದರು. ಹೆಚ್ಚು ಕಸ ಉತ್ಪಾದನೆಯಾಗುವ ಸ್ಥಳದಲ್ಲಿ ಸರಿಯಾಗಿ ತ್ಯಾಜ್ಯ ಸಂಗ್ರಹಿಸದವರ ಮೇಲೆ ಕ್ರಮ ಕೈಗೊಳ್ಳಬೇಕು. ಅಂಗಡಿಗಳ ಮುಂಭಾಗ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಬೇಕು. ಅದನ್ನು ಪರಿಗಣಿಸದಿದ್ದಲ್ಲಿ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್ ರಮೇಶ್‌ ಅವರು ಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರ ಹಾಗೂ ಕಸ ಬಿಸಾಡುವ ಬ್ಲಾಕ್ ಸ್ಪಾಟ್‌ಗಳ ಪರಿಶೀಲನೆ ನಡೆಸಿದರು. ‘ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಪಾದಚಾರಿ ಮಾರ್ಗಗಳಲ್ಲಿ ಸ್ಲ್ಯಾಬ್‌ಗಳನ್ನು ಕೂಡಲೇ ಸರಿಪಡಿಸಬೇಕು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಸ್ವಚ್ಛತೆ ಕಾಪಾಡಬೇಕು’ ಎಂದು ಸೂಚಿಸಿದರು. ಜಯನಗರ ಕಾಂಪ್ಲೆಕ್ಸ್ ಬಳಿ ನಿವಾಸಿಗಳ ಜೊತೆ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ, ಆದ್ಯತೆ ಮೇರೆಗೆ ಬಗೆಹರಿಸುವ ಭರವಸೆ ನೀಡಿದರು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ.ಕೆ.ವಿ. ರಾಜೇಂದ್ರ ಅವರು, ಹಾವನೂರು ವೃತ್ತ, ಬಸವೇಶ್ವರನಗರ, ಸಿದ್ಧಯ್ಯ ಪುರಾಣಿಕ ರಸ್ತೆ, 8ನೇ ಬಿ ಮುಖ್ಯರಸ್ತೆವರೆಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ರಾಜಾಜಿನಗರ ವಾರ್ಡ್ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ್ದರು. ನೇತಾಜಿ ಸುಭಾಷ್ ಚಂದ್ರ ಉದ್ಯಾನದಲ್ಲಿ ಸ್ವಚ್ಚತೆ ಕಾಪಾಡಿ, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟ ಕಾಪಾಡುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ನೀಡಲು ಕ್ರಮವಹಿಸುವಂತೆ ಸೂಚಿಸಿದರು.

ರಸ್ತೆ ಬದಿ, ಪಾದಚಾರಿ ಮಾರ್ಗಗಳು, ಮರಗಳಲ್ಲಿ ನೇತಾಡುವ ಓ.ಎಫ್‌.ಸಿ ಕೇಬಲ್‌ಗಳಿಂದ ಪಾದಚಾರಿಗಳಿಗೆ ಸಮಸ್ಯೆ ಆಗಲಿದ್ದು, ಅಂತಹ ಓ.ಎಫ್.ಸಿ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಉದ್ದಿಮೆ ಪರವಾನಗಿಯನ್ನು ಪರಿಶೀಲಿಸಿ ಕಾನೂನು ಪ್ರಕಾರ ನೀಡಬೇಕು. ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ನಿರಂತರವಾಗಿ ಹೂಳೆತ್ತಲು ಕ್ರಮಕೈಗೊಳ್ಳಿ ಎಂದು ಹೇಳಿದರು.

ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್‌. ರಮೇಶ್ ಅವರು ಇಬ್ಬಲೂರು ಜಂಕ್ಷನ್, ವಿಪ್ರೊ, ಸನ್ನಿ ಬ್ರೂಕ್ಸ್ ಬಳಿ ರಾಜಕಾಲುವೆ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಿ ಜಲಾವೃತವಾಗದಂತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ಸಾಯಿ ಲೇಔಟ್‌ಗೆ ಭೇಟಿ ನೀಡಿ ಜಲಾವೃತ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು

ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು, ಕಂದಾಯ, ಕಾಮಗಾರಿ, ಹಣಕಾಸು, ಆರೋಗ್ಯ ವಿದ್ಯುತ್ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಸಂಬಂಧಿಸಿದ ಎಂಜಿನಿಯರ್‌ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತೆರಿಗೆ ಸಂಗ್ರಹ,  ಬ್ಲ್ಯಾಕ್‌ ಸ್ಪಾಟ್‌ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು, ವಿದ್ಯುತ್ ದೀಪಗಳ ಸಮರ್ಪಕ ನಿರ್ವಹಣೆ, ಸ್ವಚ್ಛತಾ ಕಾರ್ಯ ಮತ್ತು ಇತರೆ ಕಾರ್ಯಗಳಿಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳು ಅವರವರ ಜವಾಬ್ದಾರಿಗಳನ್ನು ಅರಿತು ಪ್ರತಿದಿನ ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸಲು ಸೂಚಿಸಿದರು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅವರು ರಾಜಾಜಿನಗರದಲ್ಲಿ ಮರಗಳ ಮೇಲಿನ ಒಎಫ್‌ಸಿ ಪರಿಶೀಲಿಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು

ಜಿಐಎಸ್ ಮೂಲಕ ಜಿಬಿಎ ಗಡಿ ಮಾಹಿತಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳ ಗಡಿಗಳ ಮಾಹಿತಿಯನ್ನು ಜಿಐಎಸ್ ಅಪ್ಲಿಕೇಷನ್‌ (https://bbmp.gov.in/gisviewer/index.html) ಮೂಲಕ ಪಡೆಯಬಹುದು. ಜಿಬಿಎ ನಗರ ಪಾಲಿಕೆಗಳ ಗಡಿ ವಿಧಾನಸಭೆ ಕ್ಷೇತ್ರದ ಗಡಿ 198 ವಾರ್ಡ್‌ಗಳ ಗಡಿಯನ್ನೂ ಪಡೆಯಬಹುದು. ಇನ್ನಷ್ಟು ಸುಲಭ ಬಳಕೆಯ ಆವೃತ್ತಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಬಿಎ ಮಾಹಿತಿ ತಂತ್ರಜ್ಞಾನ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಒಎಫ್‌ಸಿ ಕೇಬಲ್‌ ತೆರವಿಗೆ ಸೂಚನೆ

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ.ಕೆ.ವಿ. ರಾಜೇಂದ್ರ ಅವರು, ಹಾವನೂರು ವೃತ್ತ, ಬಸವೇಶ್ವರನಗರ, ಸಿದ್ಧಯ್ಯ ಪುರಾಣಿಕ ರಸ್ತೆ, 8ನೇ ಬಿ ಮುಖ್ಯರಸ್ತೆವರೆಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ರಾಜಾಜಿನಗರ ವಾರ್ಡ್ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ್ದರು. ನೇತಾಜಿ ಸುಭಾಷ್ ಚಂದ್ರ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಿ, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟ ಕಾಪಾಡುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ನೀಡಲು ಕ್ರಮವಹಿಸುವಂತೆ ಸೂಚಿಸಿದರು.

ರಸ್ತೆ ಬದಿ, ಪಾದಚಾರಿ ಮಾರ್ಗಗಳು, ಮರಗಳಲ್ಲಿ ನೇತಾಡುವ ಒಎಫ್‌ಸಿ ಕೇಬಲ್‌ಗಳಿಂದ ಪಾದಚಾರಿಗಳಿಗೆ ಸಮಸ್ಯೆ ಆಗಲಿದ್ದು, ಅಂತಹ ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಉದ್ದಿಮೆ ಪರವಾನಗಿಯನ್ನು ಪರಿಶೀಲಿಸಿ ಕಾನೂನು ಪ್ರಕಾರ ನೀಡಬೇಕು. ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ನಿರಂತರವಾಗಿ ಹೂಳೆತ್ತಲು ಕ್ರಮಕೈಗೊಳ್ಳಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.