ADVERTISEMENT

ಜಿಬಿಎ ಚುನಾವಣೆ | ಮತದಾರರ ಪಟ್ಟಿ ಪ್ರಕಟಣೆಯ ಗಡುವು ವಿಸ್ತರಣೆ: ರಾಜ್ಯ ಚು.ಆಯೋಗ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 18:55 IST
Last Updated 25 ಫೆಬ್ರುವರಿ 2026, 18:55 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಐದು ನಗರ ಪಾಲಿಕೆಗಳ ಚುನಾವಣೆಗೆ ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಪ್ರಕಟಣೆಯ ಗಡುವನ್ನು ಮತ್ತೆ ವಿಸ್ತರಿಸಿರುವ ರಾಜ್ಯ ಚುನಾವಣಾ ಆಯೋಗ, ಮತದಾರರ ಪರಿಷ್ಕೃತ ಕರಡು ಪಟ್ಟಿಯನ್ನು ಮತ್ತೊಮ್ಮೆ ಪ್ರಕಟಿಸಲಿದೆ.

2026ರ ಜನವರಿ 19ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದ ರಾಜ್ಯ ಚುನಾವಣಾ ಆಯೋಗ, ಮಾರ್ಚ್‌ 15ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸುವುದಾಗಿ ಹೇಳಿತ್ತು. ಆ ದಿನಾಂಕವನ್ನು ಮಾರ್ಚ್‌ 30ಕ್ಕೆ ವಿಸ್ತರಿಸಿ, ಜನವರಿ 24ರಂದು ಆದೇಶಿಸಿತ್ತು. ಇದೀಗ ಮತ್ತೆ ಗಡುವನ್ನು ಏಪ್ರಿಲ್‌ 6ರಕ್ಕೆ ವಿಸ್ತರಿಸಿ, ಫೆ.24ರಂದು ಆದೇಶ ಹೊರಡಿಸಿದೆ.

ADVERTISEMENT

ಜನವರಿ 19ರಂದು ಪ್ರಕಟಿಸಲಾದ ಮತದಾರರ ಕರಡು ಪಟ್ಟಿಯ ಕುರಿತು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಿಂದ ಹಲವಾರು ದೂರುಗಳು ಸ್ವೀಕೃತಗೊಂಡ ಕಾರಣದಿಂದ ‘ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025ರ ನಿಯಮ 30ರನ್ವಯ ತತ್ಕಾಲದಲ್ಲಿ ಜಾರಿಯಲ್ಲಿರುವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಿಗೆ ವಾರ್ಡುವಾರು ಮತದಾರರ ಪಟ್ಟಿಯನ್ನು ತಯಾರಿಸುವುದು ಸೂಕ್ತವೆಂದು ಅಭಿಪ್ರಾಯಿಸಿ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.

ಮತದಾರರ ಕರಡು ಪಟ್ಟಿಯನುಸಾರ ವಾರ್ಡುವಾರು ವಿಂಗಡಣೆಗೊಂಡಿರುವ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಪ್ರದೇಶ ಮತ್ತು ಮತದಾರರನ್ನು ಭೌತಿಕವಾಗಿ ಪರಿಶೀಲನೆ ಮಾಡಿದಾಗ ಕೆಲವು ಪ್ರದೇಶಗಳಲ್ಲಿ ಮತದಾರರ ವಿವರಗಳು ಅದಲು-ಬದಲು ಆಗಿವೆ. ಭೌಗೋಳಿಕವಾಗಿ ಒಂದು ವಾರ್ಡಿನಲ್ಲಿ ವಾಸವಾಗಿರುವ ಮತದಾರರು ಮತ್ತೊಂದು ವಾರ್ಡಿನ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಹಾಗೂ ಮತಗಟ್ಟೆಗಳ ಕೊಠಡಿ ಸಂಖ್ಯೆಗಳು ನಮೂದಿಸುವಲ್ಲಿ ತಪ್ಪುಗಳಾಗಿದ್ದು, ಸದರಿ ಲೋಪದೋಷಗಳನ್ನು ಮ್ಯಾಟ್ರಿಕ್ಸ್‌ನಲ್ಲಿ ಸರಿಪಡಿಸಲು ಅವಕಾಶ ನೀಡುವಂತೆ ಕೋರಲಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.