ADVERTISEMENT

ಶಾಲೆಗಳ ಸಹಯೋಗದಲ್ಲಿ ‘ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್’ ರಚನೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮಕ್ಕಳಲ್ಲಿ ‌ಪರಿಸರ, ಹಸಿರು ಇಂಧನ, ಸ್ವಚ್ಛತೆ, ನೀರಿನ ಸಂರಕ್ಷಣೆ, ಗುಣಮಟ್ಟದ ಗಾಳಿ ಬಗ್ಗೆ ಅರಿವು ಮೂಡಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಶಾಲೆಗಳ ಸಹಯೋಗದಲ್ಲಿ ‘ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್’ ರಚಿಸಲಾಗುವುದು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. 

ADVERTISEMENT

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ವಿಶ್ವ ಪರಿಸರ ದಿನದಂದು (ಜೂನ್ 5) ‘ಬೆಂಗಳೂರು ಹವಾಮಾನ ಕಾರ್ಯಯೋಜನೆ’ ಕ್ಲಬ್ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಒಬ್ಬ ಶಿಕ್ಷಕ ಹಾಗೂ ಕನಿಷ್ಠ 25 ವಿದ್ಯಾರ್ಥಿಗಳು ಇರಲಿದ್ದಾರೆ. ಅವರಿಗೆ ಅಗತ್ಯವಾದ ಪ್ರಮಾಣಪತ್ರ, ಗುರುತುಪತ್ರ ನೀಡಲಾಗುವುದು’ ಎಂದರು.

‘ಈ ಕ್ಲಬ್‌ಗಳ ಮೇಲ್ವಿಚಾರಣೆಗೆ ಅಧಿಕಾರಿಗಳ ತಂಡ ನೇಮಿಸಲಾಗಿದೆ. ವಿಶೇಷ ಆಯುಕ್ತರು ಇದರ ಭಾಗವಾಗಿರುತ್ತಾರೆ. ಐಎಎಸ್ ಅಧಿಕಾರಿ ಪ್ರೀತಿ ಗೆಹಲೋತ್ ಅವರ ತಂಡ ಕೂಡ ಇದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ನೂರಾರು ಶಾಲೆಗಳನ್ನು ನೋಂದಣಿ ಮಾಡಲಾಗಿದೆ’ ಎಂದರು.

‘ದೇಶದಲ್ಲಿ ಮುಂಬೈ, ಚೆನ್ನೈ ಮತ್ತು ಬೆಂಗಳೂರು ಈ ಮೂರು ನಗರಗಳು ಹವಾಮಾನ ಕಾರ್ಯಯೋಜನೆಯಲ್ಲಿ ತೊಡಗಿಸಿಕೊಂಡಿವೆ. ಇದರ ಭಾಗವಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಜಿಬಿಎ ವ್ಯಾಪ್ತಿಯಲ್ಲಿ ಆರು ಸಾವಿರ ಶಾಲೆಗಳಿದ್ದು, ಅದರಲ್ಲಿ 4,500 ಖಾಸಗಿ, 1,500 ಸರ್ಕಾರಿ ಶಾಲೆಗಳಿವೆ. ಎಲ್ಲ ಶಾಲೆಗಳು ಈ ಯೋಜನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಈಗಾಗಲೇ 650 ಶಾಲೆಗಳು ಹಾಗೂ ಪಿಯು ಕಾಲೇಜುಗಳು ಒಪ್ಪಿಗೆ ನೀಡಿವೆ. ಈಗಾಗಲೇ 18 ಕ್ಲಬ್‌ಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ತಿಳಿಸಿದರು.

‘ಈ ಕ್ಲಬ್‌ಗಳನ್ನು ರಚಿಸಲು ಸಾರ್ವಜನಿಕ ಸಂಘ–ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು. ಅವುಗಳ ನೋಂದಣಿಗೆ 6ರಂದು ವೆಬ್‌ಸೈಟ್‌ ಅನಾವರಣಗೊಳಿಸಲಾಗುವುದು. ಅಂದು ಸಂಜೆ ನೆಹರೂ ತಾರಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಸ್ತುಪ್ರದರ್ಶನ ಕೂಡ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕ್ಲಬ್ ಮೂಲಕ ರಸಪ್ರಶ್ನೆ, ಚರ್ಚಾ ಸ್ಪರ್ಧೆ ಆಯೋಜಿಸಲಾಗುವುದು’ ಎಂದು ಹೇಳಿದರು.

‘ಕ್ಲಬ್‌ಗಳಲ್ಲಿ ಭಾಗವಹಿಸುವವರಿಗೆ ಹಸಿರು ಇಂಧನ, ಘನತ್ಯಾಜ್ಯ ನಿರ್ವಹಣೆ, ಗಾಳಿ ಗುಣಮಟ್ಟ, ತ್ಯಾಜ್ಯ ನೀರು, ಮಳೆನೀರು, ನಗರ ಯೋಜನೆ, ವಿಪತ್ತು ನಿರ್ವಹಣೆ ವಿಚಾರಗಳನ್ನು ಪರಿಗಣಿಸಿ ಬ್ಲೂ, ಗ್ರೀನ್ ಪ್ರಶಸ್ತಿ ನೀಡಲಾಗುತ್ತದೆ. 175 ಮಂದಿ, ಸಂಘ ಸಂಸ್ಥೆಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ’ ಎಂದರು.

‘ನ್ಯಾಯಾಲಯದ ನಿರ್ದೇಶನದ ಮೇರೆಗೆ ನಗರದಲ್ಲಿ ಮರಗಣತಿ ಮಾಡಲು ತೀರ್ಮಾನಿಸಿದ್ದು, ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ಪ್ರಾಯೋಗಿಕ ಯೋಜನೆ ಮಾಡಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದೊಂದು ವಾರ್ಡಿಗೆ ₹1 ಕೋಟಿ ಮೀಸಲಿಟ್ಟು ಬೆಂಗಳೂರು ಗ್ರೀನ್ ವಾರ್ಡ್ ಆಗಿ ಮಾಡಲಾಗುವುದು’ ಎಂದು ಹೇಳಿದರು.

ಜಿಬಿಎ ಗಡಿ ನಿಗದಿ: ‘ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ 2–3 ದಿನಗಳಲ್ಲಿ ಎಷ್ಟು ಪಾಲಿಕೆ ಮಾಡಬೇಕು ಎಂದು ತೀರ್ಮಾನಿಸಿ, ಅಂತಿಮ ರೂಪ ನೀಡಲಾಗುವುದು. ಈ ಪಾಲಿಕೆಗಳ ಚುನಾವಣೆ ನಡೆಸಬೇಕು. ನಂತರ ಯಾವ ಯಾವ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಗುವುದು’ ಎಂದು ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.