ADVERTISEMENT

ಸುಳ್ಳು ವಿಡಿಯೊ ಹರಿಯಬಿಟ್ಟಿದ್ದ ಮಹಿಳೆಯ ವಿಚಾರಣೆ

ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 21:32 IST
Last Updated 12 ಮೇ 2021, 21:32 IST
ಕಮಲ್ ಪಂತ್
ಕಮಲ್ ಪಂತ್   

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಕರ್ನಾಟಕ ಪೊಲೀಸರು ವ್ಯಕ್ತಿಯೊಬ್ಬರನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ ಎಂದುಹಳೆಯ ವಿಡಿಯೊ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಹರಿಯಬಿಟ್ಟಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಬೆಂಗಳೂರು ದಕ್ಷಿಣ ಸೆನ್‌ ಠಾಣೆ ಪೊಲೀಸರು ವಶಕ್ಕೆ ಪ‍ಡೆದಿದ್ದಾರೆ.

ವಿಡಿಯೊಗೆ ಹಿನ್ನೆಲೆ ಧ್ವನಿ ನೀಡಿ, ರಾಜ್ಯದ ಪೊಲೀಸರ ಮೇಲೆ ಸುಳ್ಳು ಆರೋಪ ಮಾಡಿದ್ದಬೆಂಗಳೂರಿನಪದ್ಮಾ ಹರೀಶ್ ಎಂಬ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.

‘ಲಾಕ್‌ಡೌನ್ ವೇಳೆ ವಾಟ್ಸ್‌ಆ್ಯಪ್‌ ಮೂಲಕ ಪೊಲೀಸರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ತುಣುಕನ್ನು ಹಂಚಿಕೊಳ್ಳಲಾಗಿತ್ತು. ವಿಡಿಯೊದಲ್ಲಿ ಪದ್ಮಾ ಹರೀಶ್ ಹೆಸರಿನ ಮಹಿಳೆಯು ರಾಜ್ಯ ಪೋಲಿಸ್ ಪಡೆಯನ್ನು ಅವಾಚ್ಯ ಶಬ್ದಗಳಿಂದ ದೂಷಿಸಿ ಹಾಗೂ ಪೊಲೀಸರ ಮೇಲೆ ಸಾರ್ವಜನಿಕರು ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರೇರೇಪಿಸಿದ್ದರು’ ಎಂದು ಪೊಲೀಸ್ ಇಲಾಖೆಯ ಫ್ಯಾಕ್ಟ್‌ಚೆಕ್ ತಂಡ ತಿಳಿಸಿದೆ.

ADVERTISEMENT

‘ವಿಡಿಯೊ ಸಂಬಂಧ ಪರಿಶೀಲನೆ ನಡೆಸಿದಾಗ, ಈ ವಿಡಿಯೊ ಕಳೆದ ವರ್ಷದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಮುಂಬೈ ಸಮೀಪದ ಮುಂಬ್ರಾದಲ್ಲಿ ಸಂಭವಿಸಿದ ಘಟನೆ ಎಂದು ತಿಳಿದು ಬಂದಿದೆ’ ಎಂದೂ ಸ್ಪಷ್ಟಪಡಿಸಿದೆ.

‘ಹಳೆಯ ವಿಡಿಯೊ ಎಂದು ತಿಳಿದುಕೊಳ್ಳದ ಪದ್ಮಾ, ಆಕ್ರೋಶದಿಂದ ಹಿನ್ನೆಲೆ ಧ್ವನಿ ನೀಡಿ, ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ವಿಚಾರವನ್ನು ಪೊಲೀಸರು ನಗರ ಪೊಲೀಸ್ ಕಮಿಷನರ್ ಕಮಲ್‍ಪಂತ್ ಗಮನಕ್ಕೆ ತಂದಿದ್ದರು. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಮಿಷನರ್ ಸೂಚಿಸಿದ್ದರು’.

‘ಈ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು. ಈ ವೇಳೆ ವಿಡಿಯೊ ಹರಿಬಿಟ್ಟಿದ್ದ ಪದ್ಮಾ ಸಿಕ್ಕಿಬಿದ್ದಿದ್ದಾರೆ. ಅವರ ಮೊಬೈಲ್‌ನಲ್ಲೂ ವಿಡಿಯೊ ಪತ್ತೆಯಾಗಿದೆ. ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

*
ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು. ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು.
–ಕಮಲ್ ಪಂತ್, ನಗರ ಪೊಲೀಸ್ ಕಮಿಷನರ್

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.