ADVERTISEMENT

ಬೆಂಗಳೂರು: ಮಹಡಿಯಿಂದ ಎಸೆದು ಮಗುವನ್ನು ಕೊಂದ ತಾಯಿ, ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 13:46 IST
Last Updated 5 ಆಗಸ್ಟ್ 2022, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಂಪಂಗಿರಾಮನಗರ ಠಾಣೆ ವ್ಯಾಪ್ತಿಯಲ್ಲಿ ದ್ವಿತಿ ಎಂಬ ನಾಲ್ಕು ವರ್ಷದ ಹೆಣ್ಣು ಮಗುವನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ತಾಯಿ ಸುಷ್ಮಾ (34) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಅದ್ವಿತ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಸುಷ್ಮಾ, ತಮ್ಮದೇ ಮಗು ದ್ವಿತಿಯನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಪತಿ ಕಿರಣ್ (38) ನೀಡಿರುವ ದೂರು ಆಧರಿಸಿ ಸುಷ್ಮಾ ಅವರನ್ನು ಬಂಧಿಸಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.

‘ದಂತ ವೈದ್ಯ ಆಗಿರುವ ಸುಷ್ಮಾ, ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಕಿರಣ್ ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕೆಲ ವರ್ಷ ಲಂಡನ್‌ನಲ್ಲಿ ದಂಪತಿ ವಾಸವಿದ್ದರು. ಬಳಿಕ, ಬೆಂಗಳೂರಿಗೆ ಬಂದು ಸಿ.ಕೆ. ಗಾರ್ಡನ್‌ನಲ್ಲಿರುವ ಅದ್ವಿತ್ ಅಪಾರ್ಟ್ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಹೆಣ್ಣು ಮಗು ದ್ವಿತಿ ಜೊತೆ ವಾಸವಿದ್ದರು. ಕಿರಣ್‌ ಅವರ ತಾಯಿಯೂ ಜೊತೆಗಿದ್ದರು’ ಎಂದೂ ಹೇಳಿದರು.

ADVERTISEMENT

ಬುದ್ಧಿಮಾಂದ್ಯ ಕಾರಣಕ್ಕೆ ಕೃತ್ಯ: ‘ಸುಷ್ಮಾ ಅವರಿಗೆ ಮದುವೆಯಾಗಿ ಆರು ವರ್ಷವಾದರೂ ಮಗು ಆಗಿರಲಿಲ್ಲ. ಹಲವು ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಆರು ವರ್ಷಗಳ ಬಳಿಕ ದ್ವಿತಿ ಜನನವಾಗಿತ್ತು. ಮಗುವನ್ನು ತಾಯಿ ಆರಂಭದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಗು ಹೆಚ್ಚು ಕ್ರಿಯಾಶೀಲವಾಗಿರಲಿಲ್ಲ. ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಅದಕ್ಕೆ ಮಗು ಸ್ಪಂದಿಸಿರಲಿಲ್ಲ. ಕೆಲ ತಿಂಗಳ ಹಿಂದೆಯಷ್ಟೇ ಮಗುವಿನ ಪರೀಕ್ಷೆ ನಡೆಸಿದ್ದ ವೈದ್ಯರೊಬ್ಬರು, ‘ಮಗು ಬುದ್ಧಿಮಾಂದ್ಯವಿದ್ದು, ಮಾತು ಬರುವುದಿಲ್ಲ’ ಎಂದಿದ್ದರು. ಇದರಿಂದ ಸುಷ್ಮಾ ಮಾನಸಿಕವಾಗಿ ಕುಗ್ಗಿದ್ದರು.’

‘ಮಗುವಿನ ಯಾತನೆ ಹಾಗೂ ಅದಕ್ಕೆ ಮಾತು ಬರುವುದಿಲ್ಲವೆಂದು ತಿಳಿದು ತಾಯಿ ಕೊಲೆಗೆ ಸಂಚು ರೂಪಿಸಿದ್ದರು‘ ಎಂದೂ ತಿಳಿಸಿವೆ.

ಮಗು ತಳ್ಳಿ ರಕ್ಷಣೆ ನಾಟಕ: ‘ಕಿರಣ್ ತಾಯಿ ಗುರುವಾರ ಮಧ್ಯಾಹ್ನ ಮನೆಯೊಳಗೆ ಮಗು ಜೊತೆ ಆಟವಾಡುತ್ತಿದ್ದರು. ಇದೇ ವೇಳೆಯೇ ಮಗುವನ್ನು ಪಡೆದುಕೊಂಡಿದ್ದ ಸುಷ್ಮಾ, ಮನೆಯಿಂದ ಹೊರಗೆ ಬಂದಿದ್ದರು. ಮಹಡಿಯಲ್ಲಿ ಅತ್ತಿತ್ತ ಓಡಾಡುತ್ತ, ಮಗುವನ್ನು ಎಸೆದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಗು ಕೈ ಜಾರಿ ಬಿತ್ತು’ ಎಂದು ಚೀರಾಡಿದ್ದ ಸುಷ್ಮಾ, ರಕ್ಷಣೆ ನಾಟಕವಾಡಿದ್ದರು. ತೀವ್ರ ಗಾಯಗೊಂಡ ಸ್ಥಿತಿಯಲ್ಲೂ ಮಗು ಉಸಿರಾಡುತ್ತಿತ್ತು. ಅದನ್ನು ಗಮನಿಸಿದ್ದ ಸ್ಥಳೀಯರು ನಿಮ್ಹಾನ್ಸ್‌ಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮಗು ಅಸುನೀಗಿತು’ ಎಂದೂ ತಿಳಿಸಿವೆ.

ಸಿ.ಸಿ.ಟಿ.ವಿ ದೃಶ್ಯ ನೀಡಿದ ಸುಳಿವು: ‘ಆಕಸ್ಮಿಕ ಘಟನೆಯೆಂದೇ ಬಿಂಬಿಸಿದ್ದ ಸುಷ್ಮಾ, ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿದ್ದರು. ಅವರ ನಡೆಯಿಂದ ಅನುಮಾನ ಬಂದು, ಅಪಾರ್ಟ್‌ಮೆಂಟ್‌ ಸಮುಚ್ಚಯದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಲಾಯಿತು. ಅವರೇ ಮಗುವನ್ನು ಎಸೆದಿದ್ದು ಖಾತ್ರಿಯಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಗು ಎಸೆದ ನಂತರ ಸುಷ್ಮಾ ಸಹ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಶಬ್ದ ಕೇಳಿ ಹೊರಬಂದಿದ್ದ ಪಕ್ಕದ ಫ್ಲ್ಯಾಟ್‌ ನಿವಾಸಿಗಳು, ಸುಷ್ಮಾ ಅವರನ್ನು ರಕ್ಷಿಸಿದ್ದಾರೆ’ ಎಂದೂ ತಿಳಿಸಿವೆ.

ನಿಲ್ದಾಣದಲ್ಲೇ ಮಗು ಬಿಟ್ಟುಬಂದಿದ್ದ ಸುಷ್ಮಾ

‘ಮಗು ಬೇಡವೆಂದು ತೀರ್ಮಾನಿಸಿದ್ದ ತಾಯಿ, ಅದನ್ನು ಎಲ್ಲಿಯಾದರೂ ಬಿಟ್ಟು ಬರಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು. ಆದರೆ, ಅದಕ್ಕೆ ಪತಿ ಕಿರಣ್ ಒಪ್ಪಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೂರು ತಿಂಗಳ ಹಿಂದೆ ಪತಿಗೆ ಗೊತ್ತಾಗದಂತೆ ಮಗುವನ್ನು ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದ ತಾಯಿ, ಅಲ್ಲಿಯೇ ಬಿಟ್ಟು ವಾಪಸು ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಕಿರಣ್ ಅವರೇ ನಿಲ್ದಾಣಕ್ಕೆ ಹೋಗಿ ಮಗುವನ್ನು ವಾಪಸು ಕರೆತಂದಿದ್ದರು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.