ADVERTISEMENT

ಬೆಂಗಳೂರು: ಡ್ರಾಪ್ ನೆಪದಲ್ಲಿ ಸುಲಿಗೆ, ಮೂವರು ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 16:14 IST
Last Updated 9 ಸೆಪ್ಟೆಂಬರ್ 2023, 16:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಡ್ರಾಪ್ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕ್ಯಾಬ್ ಚಾಲಕರಾದ ನಂಜುಂಡ, ಗಿರೀಶ್ ಹಾಗೂ ನವೀನ್ ಬಂಧಿತರು. ₹ 60,100 ಮೌಲ್ಯದ ಚಿನ್ನದ ಕಿವಿಯೋಲೆ, ಮೂರು ಮೊಬೈಲ್ ಹಾಗೂ ₹ 10 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಸೆ. 2ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಮಾಗಡಿಗೆ ಹೊರಟಿದ್ದ ದೂರುದಾರ, ಹೊರವರ್ತುಲ ರಸ್ತೆಯ ಸುಮನಹಳ್ಳಿ ಜಂಕ್ಷನ್‌ ಬಳಿ ನಿಂತಿದ್ದರು. ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಮಾಗಡಿಗೆ ಹೊರಟಿರುವುದಾಗಿ ಹೇಳಿ ದೂರುದಾರರನ್ನು ಹತ್ತಿಸಿಕೊಂಡಿದ್ದರು. ನಂತರ, ಮಾಗಡಿಯತ್ತ ಕಾರು ಹೊರಟಿತ್ತು.’

‘ಮಾರ್ಗಮಧ್ಯೆ ದೂರುದಾರರಿಗೆ ಡ್ಯಾಗರ್ ತೋರಿಸಿದ್ದ ಆರೋಪಿಗಳು, ಕೊಲೆ ಮಾಡುವುದಾಗಿ ಬೆದರಿಸಿದ್ದರು. ದೂರುದಾರ ಕೂಗಾಡಲಾರಂಭಿಸಿದ್ದರು. ಆರೋಪಿಗಳು ಕಾರಿನಲ್ಲಿದ್ದ ಮ್ಯೂಸಿಕ್ ಪ್ಲೇಯರ್ ಶಬ್ದ ಹೆಚ್ಚಿಸಿದ್ದರು. ಬಳಿಕ, ದೂರುದಾರರ ಗೂಗಲ್‌ ಪೇಯಿಂದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಮೊಬೈಲ್ ಕಿತ್ತುಕೊಂಡು, ಮಾರ್ಗಮಧ್ಯೆಯೇ ಇಳಿಸಿ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸುಲಿಗೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಚಾಲಕರಾಗಿದ್ದ ಮೂವರು, ಹಣ ಸಂಪಾದನೆಗಾಗಿ ಸುಲಿಗೆ ಮಾಡುತ್ತಿದ್ದರು. ಮತ್ತಷ್ಟು ಕಡೆ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.