ADVERTISEMENT

Bengaluru Crime | ಪ್ರೇಯಸಿಗೆ ₹3 ಕೋಟಿಯ ಮನೆ ನಿರ್ಮಿಸಿದ್ದ ಕಳ್ಳ

ಬಾಕ್ಸಿಂಗ್‌– ಕರಾಟೆ ಬಿಟ್ಟು ಕಳ್ಳತನಕ್ಕೆ ಇಳಿದಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 0:30 IST
Last Updated 5 ಫೆಬ್ರುವರಿ 2025, 0:30 IST
ಪಂಚಾಕ್ಷರಿ
ಪಂಚಾಕ್ಷರಿ   

ಬೆಂಗಳೂರು: ಹಲವು ರಾಜ್ಯಗಳಲ್ಲಿ 150ಕ್ಕೂ ಹೆಚ್ಚು ಮನೆಗಳ್ಳತನ ನಡೆಸಿ, ಕದ್ದ ಹಣ ಹಾಗೂ ಚಿನ್ನಾಭರಣದಿಂದಲೇ ಪ್ರೇಯಸಿಗೆ ₹3 ಕೋಟಿ ವೆಚ್ಚದಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  

ಅಂತರ ರಾಜ್ಯ ಕಳ್ಳ, ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ಪಂಚಾಕ್ಷರಿ ಸಂಗಯ್ಯಸ್ವಾಮಿ(37) ಎಂಬಾತನನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕೋಲ್ಕತ್ತಾದಲ್ಲಿ ಪ್ರೇಯಸಿಗೆ ಮನೆ ನಿರ್ಮಿಸಿರುವ ವಿಷಯ ತನಿಖೆ ವೇಳೆ ಗೊತ್ತಾಗಿದೆ.

ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ 181 ಗ್ರಾಂ ಚಿನ್ನದ ಗಟ್ಟಿ, 33 ಗ್ರಾಂ ಬೆಳ್ಳಿ ಸಾಮಗ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವುಗಳ ಮೌಲ್ಯ ₹12.25 ಲಕ್ಷ ಎಂದು ಅಂದಾಜಿಸಲಾಗಿದೆ.‌

ADVERTISEMENT

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 13 ದಿನ ತಮ್ಮ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮಹಾರಾಷ್ಟ್ರ ಕಾರಾಗೃಹದಿಂದ ವರ್ಷದ ಹಿಂದೆ ಬಿಡುಗಡೆಯಾಗಿದ್ದ ಆರೋಪಿ, ಜನವರಿ 9ರಂದು ಮಡಿವಾಳ ಠಾಣೆ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯ ಬಾಗಿಲು ಒಡೆದು 410 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸುಮಾರು 200 ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಪರಿಶೀಲಿಸಿ ಆರೋಪಿಯನ್ನು ಮಡಿವಾಳ ಮಾರುಕಟ್ಟೆಯಲ್ಲಿ ಬಂಧಿಸಲಾಯಿತು. ಆರೋಪಿಯ ವಿಚಾರಣೆ ವೇಳೆ ಹಲವು ವಿಚಾರಗಳು ಬಯಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.  

ಪಂಚಾಕ್ಷರಿ ಸಂಗಯ್ಯಸ್ವಾಮಿ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಆಗಾಗ ಬೆಂಗಳೂರು ನಗರಕ್ಕೂ ಬಂದು ಮನೆ ಕಳ್ಳತನ ಮಾಡಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.

‘ಆರೋಪಿಯ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆಯ ಸಾವಿನ ಬಳಿಕ ತಾಯಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಲಾಗಿತ್ತು. ಪಂಚಾಕ್ಷರಿ ಬಾಕ್ಸಿಂಗ್‌ ಪಟು; ಕರಾಟೆಯಲ್ಲೂ ಸಾಧನೆ ಮಾಡಿದ್ದ. ಕರಾಟೆಯಲ್ಲಿ ‘ಬ್ಲಾಕ್‌ ಬೆಲ್ಟ್‌’ ಪಡೆದಿದ್ದ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್‌ ಟೂರ್ನಿಗಳಲ್ಲಿ ಸ್ಪರ್ಧಿಸಿ ಬಹುಮಾನ ಗಳಿಸಿದ್ದ. ಈ ಮಧ್ಯೆ ಮದ್ಯಪಾನದ ಚಟಕ್ಕೆ ಬಿದ್ದಿದ್ದ. ವಿಲಾಸಿ ಜೀವನಕ್ಕಾಗಿ ಬಾಕ್ಸಿಂಗ್‌ ಬಿಟ್ಟು, 2009ರಿಂದ ಕಳ್ಳತನ ಮಾಡಲು ಇಳಿದಿದ್ದ. ಕಳ್ಳತನದಿಂದಲೇ ಕೋಟ್ಯಂತರ ರೂಪಾಯಿ ಗಳಿಸಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗೆ ಮದುವೆ ಆಗಿತ್ತು. 18 ವರ್ಷಗಳಿಂದ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ, ಮುಂಬೈನ ಪಬ್‌ವೊಂದರಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಗೆ ಕೋಲ್ಕತ್ತದಲ್ಲೇ ₹3 ಕೋಟಿ ವೆಚ್ಚದಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಟ್ಟಿದ್ದ. ಆಕೆಯ ಜನ್ಮ ದಿನಾಚರಣೆ ವೇಳೆ ₹22 ಲಕ್ಷ ಮೌಲ್ಯದ ಅಕ್ವೇರಿಯಂ ಅನ್ನು ಉಡುಗೊರೆಯಾಗಿ ನೀಡಿದ್ದ. ಅಲ್ಲದೇ ತಾಯಿ ಹೆಸರಿನಲ್ಲಿ ಬೆಂಗಳೂರಿನಲ್ಲೂ ಮನೆಯೊಂದನ್ನು ಖರೀದಿಸಿದ್ದ. ಯಾರಿಗೂ ಅನುಮಾನ ಬರಬಾರದೆಂದು ಬೆಂಗಳೂರಿನಲ್ಲಿ ಮನೆ ಖರೀದಿಗೆ ಬ್ಯಾಂಕ್‌ವೊಂದರಿಂದ ಸಾಲ ಸಹ ಪಡೆದುಕೊಂಡಿದ್ದ’ ಎಂದು ಮೂಲಗಳು ಹೇಳಿವೆ.

ಆರೋಪಿಯು ಸಾಮಾನ್ಯವಾಗಿ ಬೀಗ ಹಾಕಿರುವ‌ ಮನೆಗಳನ್ನೇ ಗುರುತಿಸಿ ಕೃತ್ಯ ಎಸಗುತ್ತಿದ್ದ. ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ‘ಫೈರ್‌ ಗನ್ ಫರ್‌ನೇಸ್‌’ ಸೇರಿದಂತೆ ಕೆಲವು ಉಪಕರಣಗಳನ್ನು ಬಳಸಿ ಚಿನ್ನದ ಗಟ್ಟಿಯಾಗಿ ಮಾರ್ಪಾಡು ಮಾಡುತ್ತಿದ್ದ. ನಂತರ, ಚಿನ್ನದ ಗಟ್ಟಿಯನ್ನು ಚಿನ್ನಾಭರಣ ಅಂಗಡಿಗೆ ಮಾರಾಟ ಮಾಡುತ್ತಿದ್ದ. ಇದರಿಂದ ಆರೋಪಿಯ ಪತ್ತೆ ಸವಾಲಾಗಿ ಪರಿಣಮಿಸಿತ್ತು ಎಂದು ಪೊಲೀಸರು ಹೇಳಿದರು.

ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ, ಮಡಿವಾಳ ಉಪ ವಿಭಾಗದ ಎಸಿಪಿ ಲಕ್ಷ್ಮೀನಾರಾಯಣ್ ಮತ್ತು ಮಡಿವಾಳ ಠಾಣೆಯ ಪಿಐ ಎಂ.ಎ.ಮೊಹಮ್ಮದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು. 

ಬಾಲಿವುಡ್ ನಟಿಗೂ ಹಣ ನೀಡಿದ್ದ

ಆರೋಪಿಯ ವಿಚಾರಣೆ ವೇಳೆ ಹಲವು ಮಹತ್ವ ವಿಚಾರಗಳು ಬಯಲಾಗಿವೆ. 2012ರಲ್ಲಿ ಬಾಲಿವುಡ್‌ನ ನಟಿಯೊಬ್ಬಳಿಗೆ ₹15 ಲಕ್ಷ ಕೊಟ್ಟಿದ್ದು ಪತ್ತೆಯಾಗಿದೆ. ‘ಆಕೆಯ ಜತೆಗೆ ಖಾಸಗಿ ಕ್ಷಣ ಕಳೆಯಲು ತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದೇನೆಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ’ ಎಂದು ಮೂಲಗಳು ಹೇಳಿವೆ.

ಪಿ.ಜಿಯಲ್ಲಿ ವಾಸ್ತವ್ಯ

ಕಳ್ಳತನ ಮಾಡಲು ಕೆಲವು ತಿಂಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ ಪಂಚಾಕ್ಷರಿ ಕೋರಮಂಗಲದ ವೆಂಕಟರೆಡ್ಡಿ ಲೇಔಟ್‌ನಲ್ಲಿರುವ ಪಿ.ಜಿಯಲ್ಲಿ ವಾಸ್ತವ್ಯ ಮಾಡಿದ್ದ. ಪಿ.ಜಿಯಲ್ಲೂಅನುಮಾನ ಬಾರದಂತೆ ಓಡಾಟ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.