ADVERTISEMENT

ಬೆಂಗಳೂರು: ಸೆಬಿ ಕಂಪನಿಯ ಹಣಕಾಸು ವಿಭಾಗದ ಅಧಿಕಾರಿ ಎಂದು ಹೇಳಿ ₹35 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 18:38 IST
Last Updated 13 ಜನವರಿ 2026, 18:38 IST
<div class="paragraphs"><p> ವಂಚನೆ</p></div>

ವಂಚನೆ

   

ಬೆಂಗಳೂರು: ಸೆಬಿ ಕಂಪನಿಯ ಹಣಕಾಸು ವಿಭಾಗದ ಅಧಿಕಾರಿ ಎಂದು ಹೇಳಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದ ಸೈಬರ್ ವಂಚಕರು ಹೂಡಿಕೆ ನೆಪದಲ್ಲಿ ₹35 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದ ಸತೀಶ್ ಹಣ ಕಳೆದುಕೊಂಡವರು. ಸತೀಶ್ ಅವರು ನಗರದ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಲ್ಲಿ ಸತೀಶ್ ಅವರು ಆಸಕ್ತಿ ಹೊಂದಿದ್ದರು. ಅದನ್ನು ಅರಿತಿದ್ದ ಸೈಬರ್ ವಂಚಕರು, ಸೆಬಿ ಸಂಸ್ಥೆಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂಬುದಾಗಿ ನಂಬಿಸಿದ್ದರು. ಆರಂಭದಲ್ಲಿ ಡಿಮ್ಯಾಟ್ ಖಾತೆಯಿಂದ ₹2.5 ಲಕ್ಷ ಹೂಡಿಕೆ ಮಾಡಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಎರಡನೇ ಬಾರಿ ದೂರುದಾರರಿಗೆ ಕರೆ ಮಾಡಿ ‘ನಿಮ್ಮ ಡಿಮ್ಯಾಟ್ ಖಾತೆಯನ್ನು ನಾವೇ ನಿರ್ವಹಣೆ ಮಾಡುತ್ತೇವೆ, ಹಣ ನೀಡಿದರೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಮಾಡಿ, ಕೊಡಲಾಗುವುದು’ ಎಂದು ವಂಚಕರು ನಂಬಿಸಿದ್ದರು. ವಂಚಕರ ಮಾತು ನಂಬಿದ್ದ ಸತೀಶ್ ಅವರು, ಆರಂಭದಲ್ಲಿ ₹20 ಲಕ್ಷ ವರ್ಗಾವಣೆ ಮಾಡಿದ್ದರು. ಕೆಲವು ತಿಂಗಳು ಕಳೆದರೂ ಲಾಭಾಂಶ ನೀಡಿರಲಿಲ್ಲ. ಸತೀಶ್ ಅವರು ಕರೆ ಮಾಡಿ ಪ್ರಶ್ನಿಸಿದ್ದರು. ಮತ್ತಷ್ಟು ಹೂಡಿಕೆ ಮಾಡುವಂತೆ ವಂಚಕರು ಬೇಡಿಕೆ ಇಟ್ಟಿದ್ದರು. ವಂಚಕರ ಮಾತು ನಂಬಿದ ದೂರುದಾರರು ಮತ್ತೊಮ್ಮೆ ₹13.4 ಲಕ್ಷ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ವಂಚನೆ ನಡೆದಿರುವುದು ಅರಿವಿಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.