ಡಿಜಿಟಲ್ ಅರೆಸ್ಟ್
ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಯೊಬ್ಬರನ್ನು ಬೆದರಿಸಿದ ವಂಚಕರು ₹8.80 ಲಕ್ಷ ದೋಚಿರುವ ಘಟನೆ ನಡೆದಿದೆ.
ಈ ಕುರಿತು ನ್ಯೂ ಹೌಸಿಂಗ್ ಕಾಲೊನಿ ನಿವಾಸಿ, 49 ವರ್ಷದ ಮಹಿಳಾ ವಿಜ್ಞಾನಿ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೈಬರ್ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 16ರಂದು ಸಿಬಿಐ ಅಧಿಕಾರಿ ಸೋಗಿನಲ್ಲಿ ವಿಜ್ಞಾನಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬೇರೆಯವರು ಬಳಸುತ್ತಿದ್ದು, ಮಾನವ ಕಳ್ಳಸಾಗಣೆ ಸೇರಿ 17 ಪ್ರಕರಣಗಳು ದಾಖಲಾಗಿವೆ’ ಎಂದು ಬೆದರಿಸಿದ್ದಾನೆ. ಆದರೆ ವಿಜ್ಞಾನಿ, ‘ಯಾವುದೇ ಅಕ್ರಮ ಕೆಲಸದಲ್ಲಿ ನಾನು ತೊಡಗಿಲ್ಲ’ ಎಂದಿದ್ದಾರೆ.
ಕೆಲ ಹೊತ್ತಿನ ಬಳಿಕ ಮತ್ತೊಬ್ಬ ವ್ಯಕ್ತಿ ವಿಡಿಯೊ ಕರೆ ಮಾಡಿ, ‘ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ತನಿಖೆಗೆ ಸಹಕರಿಸದಿದ್ದರೆ ಬಂಧಿಸಲಾಗುವುದು. ಹೇಳಿದಂತೆ ಕೇಳಿದರೆ ಸಹಾಯ ಮಾಡುತ್ತೇನೆ. ತನಿಖೆ ಪೂರ್ಣವಾಗುವ ತನಕ ಯಾರಿಗೂ ವಿಷಯ ತಿಳಿಸಬಾರದು’ ಎಂದು ಹೇಳಿದ್ದಾನೆ.
‘ಸಿಬಿಐ ಅಧಿಕಾರಿ ಮಾತನಾಡುತ್ತಿದ್ದಾರೆ ಎಂದು ಆತಂಕಗೊಂಡ ವಿಜ್ಞಾನಿ, ವಂಚಕರು ನೀಡಿದ ಬ್ಯಾಂಕ್ ಖಾತೆಗೆ ₹8.80 ಲಕ್ಷ ವರ್ಗಾಯಿಸಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಾಗ ಅನುಮಾನಗೊಂಡು, ಈ ವಿಚಾರವನ್ನು ಕುಟುಂಬಸ್ಥರ ನಡುವೆ ಚರ್ಚಿಸಿದ್ದಾರೆ. ಆಗ ಸೈಬರ್ ವಂಚಕರ ಕೃತ್ಯ ಎಂಬುದು ಗೊತ್ತಾಗಿ ದೂರು ನೀಡಿದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.