ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಲೆ ಮಾಡಿ ಮೃತದೇಹದ ಜತೆಗೆ ಮೂರು ದಿನವಿದ್ದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಶಿವಂ(20) ಬಂಧಿತ.
ಪತ್ನಿ ಸುಮನಾ ಅವರನ್ನು ಜುಲೈ 21ರಂದು ಆರೋಪಿ ಕೊಲೆ ಮಾಡಿ ಜುಲೈ 23ರ ವರೆಗೆ ಶವದ ಜತೆಯೇ ಕಾಲ ಕಳೆದಿದ್ದ ಎಂದು ಪೊಲೀಸರು ಹೇಳಿದರು.
ಉತ್ತರ ಪ್ರದೇಶದ ದಂಪತಿ ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಥಣಿಸಂದ್ರ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶಿವಂ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ. ಸುಮನಾ ಗೃಹಿಣಿ. ಆರು ತಿಂಗಳ ಹಿಂದೆ ವಿವಾಹವಾಗಿದ್ದರು.
ಸೋಮವಾರ ರಾತ್ರಿ ಕೌಟುಂಬಿಕ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಮದ್ಯದ ನಶೆಯಲ್ಲಿದ್ದ ಶಿವಂ, ಪತ್ನಿಯ ಮುಖ ಹಾಗೂ ಮೂಗಿಗೆ ಬಲವಾಗಿ ಕೈಯಿಂದ ಹೊಡೆದಿದ್ದ. ಆಗ, ಪ್ರಜ್ಞೆತಪ್ಪಿ ಸುಮನಾ ಅವರು ಕುಸಿದು ಬಿದ್ದಿದ್ದರು. ಬಳಿಕ ಎಚ್ಚರಗೊಂಡು ಹೋಗಿ ಮಲಗಿದ್ದರು. ಮಲಗಿದ ಸ್ಥಳದಲ್ಲೇ ಸುಮನಾ ಅವರು ಮೃತಪಟ್ಟಿದ್ದರು. ಅದನ್ನು ಅರಿಯದ ಆರೋಪಿ ಪತ್ನಿ ಮಲಗಿದ್ದಾಳೆ ಎಂದು ಭಾವಿಸಿ ಮರುದಿನ ಕೆಲಸಕ್ಕೆ ಹೋಗಿದ್ದ ಎಂದು ಪೊಲೀಸರು ತಿಳಿಸಿದರು.
ಮಂಗಳವಾರ ಸಂಜೆ ಕೆಲಸದಿಂದ ಮನೆಗೆ ಬಂದು ಪತ್ನಿಯನ್ನು ಕಂಡು ಎಚ್ಚರಿಸಲು ಹೋಗಿದ್ದ. ಆಗ ಆಕೆ ಮೃತಪಟ್ಟಿರುವುದು ಗೊತ್ತಾಗಿತ್ತು. ಆತಂಕಗೊಂಡ ಶಿವಂ, ಯಾರಿಗೂ ವಿಷಯ ತಿಳಿಸದೇ ಸುಮ್ಮನಾಗಿದ್ದ. ಎಂದಿನಂತೆ ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಶವದ ಪಕ್ಕದಲ್ಲೇ ಅಡುಗೆ ಮಾಡಿ ಮದ್ಯ ಸೇವಿಸಿದ್ದ. ಕೊಳೆತ ವಾಸನೆ ಬರುತ್ತಿದ್ದಂತೆಯೇ ಸ್ಥಳೀಯರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಉತ್ತರ ಪ್ರದೇಶಕ್ಕೆ ಪರಾರಿಯಾಗಲು ಹೊರಟಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.