ADVERTISEMENT

ಬೆಂಗಳೂರು: ಹೊಸ ವರ್ಷಾಚರಣೆಗೆ ದಾಸ್ತಾನು; ₹23.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ವಿದೇಶಿ ಡ್ರಗ್ ಪೆಡ್ಲರ್ ಬಂಧನ: ಹೊಸ ವರ್ಷಾಚರಣೆಗೆ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 14:42 IST
Last Updated 25 ನವೆಂಬರ್ 2025, 14:42 IST
ಎಜೈಕ್ ನ್ಸೆಗ್ವು
ಎಜೈಕ್ ನ್ಸೆಗ್ವು   

ಬೆಂಗಳೂರು: ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ, ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲೇ ವಾಸವಾಗಿದ್ದು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿ, ₹23.74 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಲಹಂಕದ ಸ್ವರ್ಣ ಎನ್‌ಕ್ಲೇವ್‌ನಲ್ಲಿ ವಾಸವಾಗಿದ್ದ ನೈಜೀರಿಯಾ ಪ್ರಜೆ ಎಜೈಕ್ ನ್ಸೆಗ್ವು (42) ಎಂಬಾತನನ್ನು ಬಂಧಿಸಿ, 11 ಕೆ.ಜಿ. 640 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ಸ್‌, 1,040 ಎಕ್ಸ್‌ಟೆಸಿ ಮಾತ್ರೆಗಳು, 2 ಕೆ.ಜಿ. 235 ಗ್ರಾಂ ಡ್ರಗ್ಸ್ ತಯಾರಿಕೆಯ ಸಾಮಾಗ್ರಿ ಹಾಗೂ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯುಸಿನೆಸ್ ವೀಸಾದಲ್ಲಿ 2017ರಲ್ಲಿ ಕೊಲಂಬೊ ಮೂಲಕ ಭಾರತಕ್ಕೆ ಬಂದಿದ್ದ ಆರೋಪಿ, ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ವಾಸವಾಗಿದ್ದುಕೊಂಡು ಜೀವನ ನಿರ್ವಹಣೆಗಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಹೊಸ ವರ್ಷಾಚರಣೆಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲು ಡ್ರಗ್ಸ್‌ ದಾಸ್ತಾನು ಮಾಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿ ಹಾಗೂ ಉತ್ತರ ಭಾರತದ ರಾಜ್ಯಗಳಿಂದ ಮಾದಕ ವಸ್ತು ನಗರಕ್ಕೆ ಪೂರೈಕೆ ಆಗುತ್ತಿದೆ ಎಂದು ಹೇಳಿದರು.

ಆರೋಪಿ ವಿರುದ್ಧ 2019ರಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕವೂ ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದರಿಂದ 2020ರಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಮತ್ತು ವಿದೇಶಿಯರ ಕಾಯ್ದೆ ಅಡಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಡ್ರಗ್ಸ್‌ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಮತ್ತು ಹೈದರಾಬಾದ್ ಪೊಲೀಸರು ಸಹ ಬಂಧಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಹೇಳಿದರು.

ದೆಹಲಿಯಿಂದ ಡ್ರಗ್ಸ್ ತರಿಸಿಕೊಂಡು ಮನೆಯಲ್ಲಿ ದಾಸ್ತಾನು ಮಾಡಿದ್ದ. ಕರ್ನಾಟಕ, ಚೆನ್ನೈ, ಹೈದರಾಬಾದ್ ಸೇರಿ ಹಲವೆಡೆ ಪರಿಚಯಸ್ಥ ಪೆಡ್ಲರ್‌ಗಳು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂಬ ವಿಚಾರಗಳು ತನಿಖೆಯಿಂದ ಗೊತ್ತಾಗಿವೆ.

ADVERTISEMENT

ನಗರದ ಹೊರವಲಯಲ್ಲಿರುವ ರೆಸಾರ್ಟ್ ಹಾಗೂ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಿಗೆ ಡ್ರಗ್ಸ್ ಪೂರೈಸಲು ಸಿದ್ಧತೆ ನಡೆದಿತ್ತು. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಎಜೈಕ್ ನ್ಸೆಗ್ವು ಸಂಪರ್ಕದಲ್ಲಿ ಯಾವ ಪೆಡ್ಲರ್​ಗಳಿದ್ದಾರೆ? ಎಷ್ಟು ವರ್ಷಗಳಿಂದ ಪೂರೈಕೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ. ದೆಹಲಿ ಹಾಗೂ ಮುಂಬೈಯಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರ ಕುರಿತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೆ ಮಾಲೀಕರ ವಿರುದ್ಧ ಕ್ರಮ: ವಿದೇಶಿ ನಾಗರಿಕರಿಗೆ ಮನೆ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಕಾನೂನು ಪಾಲಿಸದ ಕಾರಣ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಬಾಗಲೂರು ಪೊಲೀಸರಿಗೆ ಸೂಚನೆ ನೀಡಲಾಗಿದೆ. ವಿದೇಶಿಯರಿಗೆ ಮನೆ ನೀಡುವಾಗ ಫಾರಂ ಸಿ ಸಲ್ಲಿಸಬೇಕು. ಪೊಲೀಸ್ ಠಾಣೆಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ಠಾಣಾ ವ್ಯಾಪ್ತಿಯಲ್ಲಿ ಬೃಹತ್‌ ಮೊತ್ತದ ಡ್ರಗ್ಸ್‌ ಸಂಗ್ರಹಿಸಲಾಗಿತ್ತು. ಇದರಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತು.

₹130 ಕೋಟಿ ಡ್ರಗ್ಸ್‌ ಜಪ್ತಿ

ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಪ್ರಸಕ್ತ ವರ್ಷ ₹113 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಹಲವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಡ್ರಗ್ಸ್ ನಿಯಂತ್ರಣಕ್ಕಾಗಿ ವಿಶೇಷ ಅಭಿಯಾನ ನಡೆಯುತ್ತಿದ್ದು ನಗರ ಪೊಲೀಸರು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.