ADVERTISEMENT

Bengaluru Crime: ₹23.84 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಸಾಕುಪ್ರಾಣಿಗಳ ಆಹಾರವೆಂದು ವಿದೇಶದಿಂದ ಡ್ರಗ್ಸ್ ಆಮದು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:30 IST
Last Updated 9 ಅಕ್ಟೋಬರ್ 2025, 0:30 IST
ನಜೀರ್ ಮೊಹಮ್ಮದ್
ನಜೀರ್ ಮೊಹಮ್ಮದ್   

ಬೆಂಗಳೂರು: ಪರಪ್ಪನ ಅಗ್ರಹಾರ, ಕೆ.ಜಿ.ನಗರ ಹಾಗೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಪೆಡ್ಲರ್‌ಗಳು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ವಿವಿಧ ಮಾದರಿಯ ₹23.84 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ದಾಳಿ ನಡೆಸಿ, ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತನ್ನ ಸಂಬಂಧಿಯ ನೆರವು ಪಡೆದು ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಬಂಧಿತನಿಂದ ಎಂಡಿಎಂಎ ಕ್ರಿಸ್ಟಲ್‌ ಹಾಗೂ ಅಫೀಮು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಕೆ.ಜಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ವಿದೇಶಿ ಅಂಚೆ ಕಚೇರಿಯಲ್ಲಿ ಅನುಮಾನಾಸ್ಪದ ಬಾಕ್ಸ್‌ಗಳು ಬಂದಿರುವ ಮಾಹಿತಿ ಬಂದಿತ್ತು. ಶ್ವಾನದಳದ ಜತೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಬಾಕ್ಸ್‌ಗಳಲ್ಲಿ ₹4 ಕೋಟಿ ಮೊತ್ತದ ಹೈಡ್ರೊ ಗಾಂಜಾ ಪತ್ತೆಯಾಗಿದೆ. ಸಾಕುಪ್ರಾಣಿಗಳಿಗೆ ನೀಡುವ ಆಹಾರವೆಂದು ವಿದೇಶದಿಂದ ಡ್ರಗ್ಸ್ ಅನ್ನು ಆರೋಪಿಗಳು ತರಿಸಿಕೊಳ್ಳುತ್ತಿದ್ದರು. ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಮತ್ತೊಂದು ಪ್ರಕರಣದಲ್ಲಿ ಕೆ.ಜಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ನಜೀರ್ ಮೊಹಮ್ಮದ್ ಹಾಗೂ ರಶೀದ್ ಎಂಬುವರನ್ನು ಬಂಧಿಸಿದ್ದಾರೆ.

ಆರೋಪಿಗಳು ಥಾಯ್ಲೆಂಡ್ ಹಾಗೂ ಜರ್ಮನಿಯಿಂದ ನಕಲಿ ಹೆಸರಿನಲ್ಲಿ ಕ್ರಿಪ್ಟೊ ಕರೆನ್ಸಿ ಮೂಲಕ ಹೈಡ್ರೊ ಗಾಂಜಾ  ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಡ್ರಗ್ಸ್‌ ಆರ್ಡರ್ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೊತ್ತನೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲರ್‌ಗಳಾದ ಸುಡಾನ್‌ ದೇಶದ ಜಾರ್‌ಗುವಾನ್‌ ಸಲ್ಲಾಹೆಲ್ದಿನ್‌ ಅಬುರೈ ಇಲಾಸನ್‌ ಹಾಗೂ ಮಾರ್ವ ಇಸಮ್‌ ಒಸ್ಮಾನ್‌ ವೀಡಾ ಎಂಬ ಮಹಿಳಾ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಆಧರಿಸಿ ಎನ್‌ಜಿ ಗೊಲ್ಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೆಲಸಿರುವ ಸುಡಾನ್‌ ದೇಶದ ಮಹಿಳೆಯರಿಬ್ಬರು ಡ್ರಗ್ಸ್ ಪೆಡ್ಲಿಂಗ್‌ ನಡೆಸುತ್ತಿರುವ ಮಾಹಿತಿ ಬಂದಿತ್ತು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಫ್ಲ್ಯಾಟ್‌ನಲ್ಲಿ 4 ಕೆ.ಜಿ. ಎಂಡಿಎಂಎ ಕ್ರಿಸ್ಟಲ್‌ ಪತ್ತೆಯಾಗಿತ್ತು. ಅದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ವಿದೇಶಿ ಅಂಚೆ ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಸಿಸಿಬಿ ಪೊಲೀಸರು 
ಪೆಡ್ಲರ್‌ಗಳಿಂದ ಜಪ್ತಿ ಮಾಡಿಕೊಂಡ ಡ್ರಗ್ಸ್ ಪರಿಶೀಲಿಸಿದ ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್  

9 ತಿಂಗಳಲ್ಲಿ ₹81 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಡ್ರಗ್ಸ್ ಮಾರಾಟಗಾರರ ವಿರುದ್ಧ ನಗರದಲ್ಲಿ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಒಂಬತ್ತು ತಿಂಗಳಲ್ಲಿ ₹81 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 711 ಪ್ರಕರಣ ದಾಖಲು ಮಾಡಲಾಗಿದೆ. ಡ್ರಗ್ಸ್ ಪೆಡ್ಲರ್‌ಗಳು ವಿತರಕರು ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಜಾಲಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೀಮಾಂತ್‌ಕುಮಾರ್ ಸಿಂಗ್ ಹೇಳಿದರು. ಕಳೆದ ಒಂಬತ್ತು ತಿಂಗಳಲ್ಲಿ 35 ವಿದೇಶಿ ಡ್ರಗ್ಸ್ ಪೆಡ್ಲರ್‌ಗಳೂ ಸೇರಿದಂತೆ 1048 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.