ಬೆಂಗಳೂರು: ಅರಮನೆ ಮೈದಾನ ಬಳಿಯ ಪೆಬಲ್ ಬಾರ್ ಮೇಲೆ ದಾಳಿ ನಡೆಸಿದ ಸದಾಶಿವನಗರ ಠಾಣೆಯ ಪೊಲೀಸರು, ಡ್ರಗ್ಸ್ ಸೇವಿಸುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಶನಿವಾರ ತಡರಾತ್ರಿ ಪಬ್ ಬಾರ್ ಮೇಲೆ ದಾಳಿ ನಡೆಸಿದಾಗ 180ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿದ್ದರು. ಭಾನುವಾರ ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡ್ರಗ್ಸ್ ಸೇವಿಸಿದ್ದ ಆರೋಪದ ಮೇರೆಗೆ 16 ಮಂದಿಯನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಲಾಯಿತು. ಅದರಲ್ಲಿ ಎಂಟು ಮಂದಿ ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ಎಲ್ಲರೂ 25ರಿಂದ 35 ವರ್ಷದೊಳಗಿನವರು ಎಂದು ಪೊಲೀಸರು ಹೇಳಿದರು.
ಇಬ್ಬರ ಬಂಧನ: ಎಂಡಿಎಂಎ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕರೀಮ್ ಹಾಗೂ ಅದೇ ತಾಲ್ಲೂಕಿನ ಕೊಡಿಪಾಡಿ ಗ್ರಾಮದ ಮೊಹಮ್ಮದ್ ಅಪ್ನಾನ್ ಬಂಧಿತರು.
ಬಂಧಿತರಿಂದ ₹80 ಸಾವಿರ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.