ADVERTISEMENT

ಆ್ಯಪ್ ಮೂಲಕ ಡ್ರಗ್ಸ್ ದಂಧೆ: ವಿದ್ಯಾರ್ಥಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮೇ 2022, 16:29 IST
Last Updated 23 ಮೇ 2022, 16:29 IST
ಆರೋಪಿಗಳಿಂದ ಜಪ್ತಿ ಮಾಡಲಾದ ಡ್ರಗ್ಸ್
ಆರೋಪಿಗಳಿಂದ ಜಪ್ತಿ ಮಾಡಲಾದ ಡ್ರಗ್ಸ್   

ಬೆಂಗಳೂರು: ಆ್ಯಪ್‌ ಮೂಲಕ ಡ್ರಗ್ಸ್ ತರಿಸಿಕೊಂಡು ಸಹಪಾಠಿಗಳು ಹಾಗೂ ಇತರರಿಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ವಿದ್ಯಾರ್ಥಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಿ. ಮನೋರಂಜಿತ್ (20) ಹಾಗೂ ಎಂ. ಸುಗೇಶ್‌ಕುಮಾರ್ (20) ಬಂಧಿತರು. ಇವರಿಬ್ಬರು ಜಯನಗರದ 9ನೇ ಹಂತದಲ್ಲಿರುವ ಕಾಲೇಜೊಂದರಲ್ಲಿ ಬಿ.ಕಾಂ ಹಾಗೂ ಬಿ.ಎಂ.ಎಸ್ ವ್ಯಾಸಂಗ ಮಾಡುತ್ತಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ 51.44 ಗ್ರಾಂ ಎಕ್ಸ್‌ಟೆಸ್ಸಿ ಮಾತ್ರೆಗಳು, ₹ 3,850 ನಗದು, 2 ಮೊಬೈಲ್ ಹಾಗೂ ತಮಿಳುನಾಡು ನೋಂದಣಿ ಸಂಖ್ಯೆಯ ಹುಂಡೈ ಐ–20 ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹೊಸಕೆರೆಹಳ್ಳಿಯ ಕೆಇಬಿ ಜಂಕ್ಷನ್ ಬಳಿ ಮೇ 21ರಂದು ಸಂಜೆ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಗ್ರಾಹಕರಿಗೆ ಡ್ರಗ್ಸ್ ಮಾರುತ್ತಿದ್ದರು. ಮಾಹಿತಿ ಕಲೆಹಾಕಿದ್ದ ಪೊಲೀಸರ ತಂಡ, ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ. ಪಿಎಸ್ಐ ಡಿ. ರಾಕೇಶ್ ದೂರಿನನ್ವಯ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಡ್ರಗ್ಸ್ ವ್ಯಸನಿಗಳು: ‘ತಮಿಳುನಾಡಿನ ಮನೋರಂಜಿತ್ ಹಾಗೂ ಸುಗೇಶ್‌ಕುಮಾರ್, ಕಾಲೇಜಿಗೆ ಸೇರಿದ ದಿನದಿಂದಲೂ ಡ್ರಗ್ಸ್ ಸೇವಿಸುತ್ತಿದ್ದರು. ಡ್ರಗ್ಸ್ ವ್ಯಸನಿಗಳಾಗಿದ್ದ ಅವರಿಬ್ಬರು, ಹೊರ ರಾಜ್ಯಗಳ ಪೆಡ್ಲರ್ ಜೊತೆ ಒಡನಾಟ ಇಟ್ಟುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶೈಕ್ಷಣಿಕ ಖರ್ಚಿಗೆಂದು ಪೋಷಕರು ಹಣ ಕಳುಹಿಸುತ್ತಿದ್ದರು. ಈ ಹಣದಲ್ಲಿ ಆರೋಪಿಗಳು ಡ್ರಗ್ಸ್ ಖರೀದಿಸುತ್ತಿದ್ದರು. ಆದರೆ, ನಿತ್ಯವೂ ಡ್ರಗ್ಸ್ ಖರೀದಿಸಲು ಹಣ ಸಾಲುತ್ತಿರಲಿಲ್ಲ. ಅವಾಗಲೇ ಆರೋಪಿಗಳು, ಸೇವನೆ ಜೊತೆಯಲ್ಲೇ ಡ್ರಗ್ಸ್ ಮಾರಾಟಕ್ಕೂ ಮುಂದಾಗಿದ್ದರು’ ಎಂದೂ ತಿಳಿಸಿವೆ.

ಕೊರಿಯರ್ ಮೂಲಕ ಡ್ರಗ್ಸ್: ‘ದೇಶದ ಕೆಲ ಪೆಡ್ಲರ್‌ಗಳು, ಡ್ರಗ್ಸ್ ವ್ಯವಹಾರಕ್ಕೆಂದು ಆ್ಯಪ್‌ವೊಂದನ್ನು ಬಳಸುತ್ತಿದ್ದಾರೆ. ಅದರ ತಿಳಿದುಕೊಂಡಿದ್ದ ಆರೋಪಿಗಳು, ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡು ಡ್ರಗ್ಸ್‌ ಕಾಯ್ದಿರಿಸುತ್ತಿದ್ದರು. ಕೊರಿಯರ್ ಮೂಲಕ ಆರೋಪಿಗಳ ವಿಳಾಸಕ್ಕೆ ಡ್ರಗ್ಸ್ ಬರುತ್ತಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೊಠಡಿ ಹಾಗೂ ಇತರೆ ಸ್ಥಳಗಳಲ್ಲಿ ಆರೋಪಿಗಳು ಡ್ರಗ್ಸ್ ಬಚ್ಚಿಡುತ್ತಿದ್ದರು. ಸಹಪಾಠಿಗಳು ಹಾಗೂ ಇತರರು, ಡ್ರಗ್ಸ್ ಕೇಳಿದಾಗ ಮಾರುತ್ತಿದ್ದರು. ಇವರಿಬ್ಬರಿಂದ ಕಾಲೇಜಿನ ಕೆಲ ವಿದ್ಯಾರ್ಥಿಗಳು, ಡ್ರಗ್ಸ್ ವ್ಯಸನಿಗಳಾಗಿರುವುದು ಗೊತ್ತಾಗಿದೆ. ದೆಹಲಿಯಲ್ಲಿರುವ ಪೆಡ್ಲರ್, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಮಾಹಿತಿ ಇದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.