ADVERTISEMENT

EPFO ಸಹಕಾರ ಸೊಸೈಟಿಯಲ್ಲಿ ₹70 ಕೋಟಿ ದುರ್ಬಳಕೆ: ಸಿಐಡಿ ತನಿಖೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 14:20 IST
Last Updated 6 ನವೆಂಬರ್ 2025, 14:20 IST
ಇಪಿಎಫ್‌ಒ
ಇಪಿಎಫ್‌ಒ   

ಬೆಂಗಳೂರು: ರಾಜಾರಾಮ್‌ ಮೋಹನರಾಯ್‌ ರಸ್ತೆಯಲ್ಲಿ ಇರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಸ್ಟಾಫ್‌ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ₹70 ಕೋಟಿ ದುರ್ಬಳಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಸೊಸೈಟಿಯ ಅಧ್ಯಕ್ಷ ಸಿ.ಜೆ.ಮುರುಳೀಧರ್ ಅವರು ನೀಡಿದ ದೂರಿನ ಮೇರೆಗೆ ಅಕ್ಟೋಬರ್‌ 31ರಂದು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗೋಪಿನಾಥ್‌ ಹಾಗೂ ಸಿಬ್ಬಂದಿ ಲಕ್ಷ್ಮೀ ಅವರನ್ನು ಬಂಧಿಸಿದ್ದ ಪೊಲೀಸರು, ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಚಿನ್ನಾಭರಣ, ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳು, ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದರು.

‘ದೊಡ್ಡ ಮೊತ್ತದ ಹಣ ದುರುಪಯೋಗ ಆಗಿರುವುದು ಪತ್ತೆಯಾಗಿರುವ ಕಾರಣಕ್ಕೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುವುದು. ಅಧಿಕೃತ ಆದೇಶವಾದ ಬಳಿಕ ಕಡತಗಳನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುವುದು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ADVERTISEMENT

‘ತಲೆ ಮರೆಸಿಕೊಂಡಿರುವ ಲೆಕ್ಕಾಧಿಕಾರಿ ಬಿ.ಎಲ್‌.ಜಗದೀಶ್ ಇನ್ನೂ ಪತ್ತೆಯಾಗಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‌‘ಹೂಡಿಕೆದಾರರ ಹಣವನ್ನು ನಿಶ್ಚಿತ ಠೇವಣಿ ರೂಪದಲ್ಲಿ ಇಡಲಾಗಿತ್ತು. ಅದರಿಂದ ₹60 ಕೋಟಿಗೂ ಹೆಚ್ಚು ಹಣವನ್ನು ಆರೋಪಿಗಳು ಬಿಡಿಸಿಕೊಂಡು ದುರುಪಯೋಗ ಮಾಡಿಕೊಂಡಿರುವುದು ತನಿಖೆಯಿಂದ ಪತ್ತೆಯಾಗಿದೆ. ಚಾಲ್ತಿ ಖಾತೆಯಲ್ಲಿದ್ದ ಹಣ ಮಾತ್ರ ಉಳಿದಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.