ADVERTISEMENT

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಯುವಕನಿಂದ ₹51 ಸಾವಿರ ಸುಲಿಗೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 23:30 IST
Last Updated 31 ಜನವರಿ 2025, 23:30 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಬೆಂಗಳೂರು: ಪರಿಚಿತ ಮಹಿಳೆಯ ಮಾತು ನಂಬಿದ 34 ವರ್ಷದ ವ್ಯಕ್ತಿಯೊಬ್ಬರನ್ನು ಪೊಲೀಸರ ಸೋಗಿನಲ್ಲಿ ಗುಂಪೊಂದು ಅಕ್ರಮವಾಗಿ ವಶದಲ್ಲಿರಿಸಿಕೊಂಡು, ₹51 ಸಾವಿರ ಸುಲಿಗೆ ಮಾಡಿದ ಘಟನೆ ನಡೆದಿದೆ.

ಯುವಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಠಾಣೆ ಪೊಲೀಸರು, ಆರೋಪಿಗಳಿಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ADVERTISEMENT

‘2023ರಲ್ಲಿ ಪರಿಚಯವಾದ ಲಕ್ಷ್ಮೀಗೆ ನನ್ನ ಮದುವೆಗೆ ಹುಡುಗಿ ಹುಡುಕುತ್ತಿರುವ ವಿಚಾರ ಹೇಳಿದ್ದೆ. ಜನವರಿ 21ರಂದು ಕರೆ ಮಾಡಿದ್ದ ಲಕ್ಷ್ಮೀ, ‘ಹುಡುಗಿ ನೋಡಿದ್ದು, ಹೆಬ್ಬಾಳದ ಮೇಖ್ರಿ ಸರ್ಕಲ್ ಬಳಿ ಹೋಗಿ ಯುವತಿಯನ್ನು ಭೇಟಿಯಾಗಿ’ ಎಂದು ಹೇಳಿದ್ದಳು. ಅದರಂತೆ ಮೇಖ್ರಿ ಸರ್ಕಲ್ ಬಳಿ ಹೋದಾಗ ಯುವತಿಯೊಬ್ಬಳು ಬಂದು ಮಾತುಕತೆಗಾಗಿ ಹತ್ತಿರದಲ್ಲೇ ಇದ್ದ ಮನೆಯೊಂದಕ್ಕೆ ಕರೆದೊಯ್ದಳು’ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

‘ಆ ಮನೆಯಲ್ಲಿ ಇಬ್ಬರು ಮಹಿಳೆಯರು ಇದ್ದರು. ಈ ವೇಳೆ ಯುವತಿಯು ಮನೆಗೆ ವಸ್ತುಗಳನ್ನು ತರುವುದಕ್ಕಾಗಿ ನನ್ನಿಂದ ₹1,200 ಹಣವನ್ನು ಆನ್​ಲೈನ್​ ಮೂಲಕ ವರ್ಗಾವಣೆ ಮಾಡಿಸಿಕೊಂಡಳು. ಬಳಿಕ ಖಾಸಗಿಯಾಗಿ ಮಾತನಾಡಬೇಕೆಂದು ಹೇಳಿ ಕೊಠಡಿಯ ಒಳಗೆ ನನ್ನನ್ನು ಕರೆದೊಯ್ದು ಬಾಗಿಲು ಹಾಕಿದಳು. ಮಾತನಾಡುತ್ತಿದ್ದ ವೇಳೆ ಇಬ್ಬರು ಗಂಡಸರು ಮತ್ತು ಮಹಿಳೆ ಏಕಾಏಕಿ ಬಂದು ‘ನಾವು ಪೊಲೀಸರು, ಇಲ್ಲಿ ಏನು ಮಾಡುತ್ತಿದ್ದೀರಾ? ವೇಶ್ಯಾವಾಟಿಕೆ ನಡೆಸುತ್ತಿದ್ದೀರಾ?' ಅಂತ ಬೆದರಿಸಿ, ಬೇರೊಂದು ಕೊಠಡಿ​ಗೆ ಕರೆದುಕೊಂಡು ಹೋಗಿ ಕೂಡಿಹಾಕಿದರು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಜೈಲಿಗೆ ಕಳುಹಿಸದಿರಲು ₹2 ಲಕ್ಷ ಕೊಡುವಂತೆ ಬೇಡಿಕೆ ಇಟ್ಟರು. ನನ್ನ ಬಳಿ ಅಷ್ಟು ಹಣವಿಲ್ಲ ಎಂದಾಗ ₹50 ಸಾವಿರ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡರು. ಬಳಿಕ ಘಟನೆಯ ಕುರಿತು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿ ಬಿಟ್ಟು ಕಳಿಸಿದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.